ಮೈಸೂರು , ಜನವರಿ 8, 2025 : ಸಾಂಸ್ಕೃತಿಕ ನಗರಿ ಮೈಸೂರಿನ ರಾಜೀವ್ ನಗರದ ಮುಖ್ಯ ರಸ್ತೆಯಲ್ಲಿ ಮಾದಕ ವ್ಯಸನಿಗಳ ಪುಂಡಾಟ ಮಿತಿ ಮೀರಿದ್ದು, ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆಯೇ ಹಲ್ಲೆ ನಡೆಸಿರುವ ಗಂಭೀರ ಘಟನೆ ವರದಿಯಾಗಿದೆ.

ಉದಯಗಿರಿ ಪೊಲೀಸ್ ಠಾಣೆಗೆ ಸೇರಿದ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರು ಮಾದಕ ಪದಾರ್ಥ ಸೇವನೆಯ ಅಮಲಿನಲ್ಲಿದ್ದ ಯುವಕರನ್ನು ವಿಚಾರಿಸಲು ಹೋದಾಗ ಈ ಕೃತ್ಯ ನಡೆದಿದೆ. ಅಮಲಿನಲ್ಲಿದ್ದ ಕಾರ್ತಿಕ್, ಅಮೋಘ್, ವಿಜಯ್ ಮತ್ತು ಭರತ್ ಎಂಬ ನಾಲ್ವರು ಯುವಕರು ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಬಳಿಯಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದಾರೆ.
ಈ ಅಮಾನವೀಯ ಘಟನೆಯ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಕೋರರ ಕೃತ್ಯ ಸಾಬೀತಾಗಿದೆ. ಘಟನೆಗೆ ಸಂಬಂಧಿಸಿದಂತೆ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಮಾದಕ ವ್ಯಸನಿಗಳ ಅಟ್ಟಹಾಸ ಈ ಮಟ್ಟಕ್ಕೆ ತಲುಪಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
