ಮೈಸೂರು, ಡಿಸೆಂಬರ್ 19, 2025 : ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಇಲ್ಲಿನ ಶಿಶು ಆಸ್ಪತ್ರೆಯ ಡಾ. ಅನೂಪ್ ಎಂಬುವರ ಮೇಲೆ ರುಬಿಯಾಜ್ ಷರೀಫ್ ಹಾಗೂ ಆತನ ತಂದೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಲಿನಿಕ್‌ನ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಚಪ್ಪಲಿಯನ್ನು ಹೊರಗಡೆ ಬಿಟ್ಟು ಬರುವಂತೆ ವೈದ್ಯರು ಸೂಚಿಸಿದ್ದೇ ಈ ಗಲಾಟೆಗೆ ಮುಖ್ಯ ಕಾರಣವಾಗಿದೆ.
ರುಬಿಯಾಜ್ ಷರೀಫ್ ಎಂಬುವವರ ಮೂರು ವರ್ಷದ ಮಗು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಮಗುವನ್ನು ನೋಡಲು ಬಂದಿದ್ದ ರುಬಿಯಾಜ್, ನಿಯಮ ಮೀರಿ ಚಪ್ಪಲಿ ಧರಿಸಿಕೊಂಡೇ ಆಸ್ಪತ್ರೆಯ ಒಳಭಾಗಕ್ಕೆ ಪ್ರವೇಶಿಸಿದ್ದರು. ಇದನ್ನು ಗಮನಿಸಿದ ಡಾ. ಅನೂಪ್ ಅವರು ಚಪ್ಪಲಿಯನ್ನು ಹೊರಗೆ ಬಿಡುವಂತೆ ಸೌಜನ್ಯದಿಂದ ಮನವಿ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ರುಬಿಯಾಜ್, “ನೀವು ಮಾತ್ರ ಚಪ್ಪಲಿ ಹಾಕಿಕೊಳ್ಳಬಹುದಾ?” ಎಂದು ಪ್ರಶ್ನಿಸಿ ವೈದ್ಯರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದಾನೆ.
ವೈದ್ಯರು ತಾವು ಧರಿಸಿರುವ ಚಪ್ಪಲಿ ಆಸ್ಪತ್ರೆಯ ಒಳಗಿನ ಬಳಕೆಗೆ ಮಾತ್ರ ಸೀಮಿತವಾದುದು ಎಂದು ವಿವರಿಸುತ್ತಾ, ತಾವು ಹೊರಗೆ ಬಿಟ್ಟಿದ್ದ ಚಪ್ಪಲಿಯನ್ನು ತೋರಿಸಲು ಕ್ಲಿನಿಕ್‌ನಿಂದ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ರುಬಿಯಾಜ್ ಷರೀಫ್ ಮತ್ತು ಆತನ ತಂದೆ ಏಕಾಏಕಿ ವೈದ್ಯರ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ಇಡೀ ಘಟನೆಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈದ್ಯರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಘಟನೆ ನಡೆದು ದೂರು ದಾಖಲಾದರೂ ಸಹ ಪೊಲೀಸರು ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕರ್ತವ್ಯ ನಿರತ ವೈದ್ಯರ ಮೇಲಿನ ಈ ಹಲ್ಲೆಯನ್ನು ವೈದ್ಯಕೀಯ ವಲಯ ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದೆ.
