ನಂಜನಗೂಡು, ನವೆಂಬರ್ 8, 2025 : ತಾಲೂಕಿನ ಹಾಡ್ಯ ಗ್ರಾಮದ ಬಳಿ ಚಲಿಸುತ್ತಿದ್ದ ಬೈಕ್‌ಗೆ ಕಾಡು ಹಂದಿಯೊಂದು ಹಠಾತ್ ಅಡ್ಡ ಬಂದ ಪರಿಣಾಮ ಬೈಕ್‌ನಿಂದ ಬಿದ್ದ ಸವಾರ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಮೃತ ದುರ್ದೈವಿ ರೈತರನ್ನು ಹಾಡ್ಯ ಗ್ರಾಮದ ನಿವಾಸಿ ರಂಗಸ್ವಾಮಿ (35) ಎಂದು ಗುರುತಿಸಲಾಗಿದೆ.ಹಾಡ್ಯ ಗ್ರಾಮದಿಂದ ಬೈಕಿನಲ್ಲಿ ಹುರ ಗ್ರಾಮಕ್ಕೆ ತೆರಳಿದ್ದ ರಂಗಸ್ವಾಮಿ ಅವರು, ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಸ್ತೆ ಬದಿಯ ಪೊದೆಗಳಿಂದ ದಿಢೀರನೇ ಕಾಡುಹಂದಿಯೊಂದು ಅಡ್ಡಲಾಗಿ ಬಂದಿದ್ದು, ರಂಗಸ್ವಾಮಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಬೈಕ್ ಸಮೇತ ರಂಗಸ್ವಾಮಿ ಅವರು ರಸ್ತೆಗೆ ಅಪ್ಪಳಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ರಂಗಸ್ವಾಮಿ ಅವರ ಕಿರುಚಾಟದ ಶಬ್ದದಿಂದಾಗಿ ಕಾಡು ಹಂದಿ ಸ್ಥಳದಿಂದ ಓಡಿಹೋಗಿದೆ. ರಂಗಸ್ವಾಮಿ ಅವರ ಕಿರುಚಾಟ ಕೇಳಿ ತಕ್ಷಣ ಸ್ಥಳಕ್ಕೆ ಬಂದ ಸಾರ್ವಜನಿಕರು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಂಗಸ್ವಾಮಿ ಅವರು ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಮಾಹಿತಿ ತಿಳಿದು ಹುಲ್ಲಹಳ್ಳಿ ಅರಣ್ಯ ಇಲಾಖಾ ವಿಭಾಗದ ಡಿ.ಆರ್.ಎಫ್.ಒ ವಿನೋದ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಸರ್ಕಾರದ ಬಳಿ ತೀವ್ರವಾಗಿ ಒತ್ತಾಯಿಸಿದ್ದಾರೆ.
