ಮೈಸೂರು, ಏಪ್ರಿಲ್ 20, 2026 : ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಖಾಸಗಿ ಸಂಭಾಷಣೆಯ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಕಿವಿಯಲ್ಲಿ ಏನು ಹೇಳಿದ್ದರು ಎಂಬ ಕುತೂಹಲಕ್ಕೆ ತೆರೆ ಎಳೆದರು. ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಪ್ರಧಾನಿಯವರು ನನ್ನ ಕಿವಿ ಬಳಿ ಬಂದು ಕೇಳಿದರು, ಅದಕ್ಕೆ ನಾನು ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂಬ ಉತ್ತರ ನೀಡಿದ್ದೆ ಎಂದು ಮುಖ್ಯಮಂತ್ರಿಗಳು ಸತ್ಯ ಬಿಚ್ಚಿಟ್ಟರು.
ಮಹಿಳಾ ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳಾ ಮೀಸಲಾತಿಯ ವಿರುದ್ಧವಾಗಿಲ್ಲ, ಆದರೆ ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಮಾತ್ರ ನಮ್ಮ ತಕರಾರಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಮಹಿಳಾ ಮೀಸಲಾತಿ ಜಾರಿ ಮಾಡುವ ನೈಜ ಬದ್ಧತೆ ಇಲ್ಲ, ಕೇವಲ ರಾಜಕೀಯ ಲಾಭಕ್ಕಾಗಿ ವಿಧೇಯಕದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. 2023ರಲ್ಲೇ ಇದ್ದ ವಿಧೇಯಕವನ್ನು ಆಗಲೇ ಯಾಕೆ ಜಾರಿ ಮಾಡಲಿಲ್ಲ? ಈಗ ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ ಇದನ್ನು ತಳಕು ಹಾಕಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು. ಕ್ಷೇತ್ರ ಪುನರ್ ವಿಂಗಡಣೆಯು ಹೊಸ ಜನಗಣತಿಯ ಪ್ರಕಾರ ನಡೆಯಬೇಕು. ಒಂದು ವೇಳೆ ಹಳೆಯ ಜನಗಣತಿ ಆಧರಿಸಿ ವಿಂಗಡಣೆ ನಡೆದರೆ ದಕ್ಷಿಣ ಭಾರತದ ರಾಜ್ಯಗಳಿಗೆ, ಅದರಲ್ಲೂ ಜನಸಂಖ್ಯೆ ನಿಯಂತ್ರಣ ಮಾಡಿರುವ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಪಂಚರಾಜ್ಯ ಚುನಾವಣೆ ಮತ್ತು ಗ್ಯಾರೆಂಟಿ ಯೋಜನೆಗಳ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ನಮ್ಮ ಗ್ಯಾರೆಂಟಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಿಜೆಪಿಯವರು ಈಗ ಪಂಚರಾಜ್ಯ ಚುನಾವಣೆಯಲ್ಲಿ ಅವನ್ನೇ ನಕಲು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತಾವು ಹೋಗುವುದಿಲ್ಲ ಎಂದು ತಿಳಿಸಿದ ಅವರು, ಅಲ್ಲಿ ಡಿಎಂಕೆ ಜಯಗಳಿಸಬಹುದು ಎಂದು ಭವಿಷ್ಯ ನುಡಿದರು. ಇದೇ ಸಂದರ್ಭದಲ್ಲಿ ಇಡಿ ದಾಳಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು ಮುಖ್ಯಮಂತ್ರಿಗಳಿಗೆ ಸಾತ್ ನೀಡಿದರು.
