ಮೈಸೂರು, ಜನವರಿ 22, 2026 : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ಲೋಕಾರ್ಪಣೆಗೊಂಡು ಪ್ರಾಣ ಪ್ರತಿಷ್ಠಾಪನೆಯಾದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ಅಪೂರ್ವ ಸ್ನೇಹ ಬಳಗದ ವತಿಯಿಂದ ಸಡಗರದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮಚಂದ್ರ ಪ್ರಭುವಿನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಸಾಮೂಹಿಕವಾಗಿ ಶ್ರೀರಾಮ ಜಪ ಮಾಡುತ್ತಾ, ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು, ಶತಮಾನಗಳ ಕಾಲದ ಹೋರಾಟ ಮತ್ತು ಅಸಂಖ್ಯಾತ ಕರಸೇವಕರ ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ಬಾಲರಾಮನ ಪ್ರತಿಷ್ಠಾಪನೆಯಾಗಿ ಎರಡು ವರ್ಷ ಪೂರೈಸಿರುವ ಈ ಪವಿತ್ರ ದಿನದಂದು ನಾಡಿನೆಲ್ಲೆಡೆ ಭಕ್ತಿಭಾವದ ಸಂಭ್ರಮ ಮನೆ ಮಾಡಿರುವುದು ಸಂತೋಷದ ವಿಷಯ. ಎಲ್ಲರೂ ಸಮಾನತೆ ಮತ್ತು ಪ್ರೀತಿಯಿಂದ ಬಾಳಬೇಕೆಂಬುದೇ ಶ್ರೀರಾಮನ ಆಶಯವಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಮಾಜಿ ನಗರಪಾಲಿಕೆ ಸದಸ್ಯ ಎಂ.ವಿ. ರಾಮ್‌ಪ್ರಸಾದ್ ಅವರು, ಅಯೋಧ್ಯೆಯ ಬಾಲರಾಮ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ರಾಮನ ಆದರ್ಶ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಸಂಭ್ರಮಾಚರಣೆಯಲ್ಲಿ ವೆಂಗಿಪುರದ ಇಳೈ ಆಳ್ವಾರ್ ಸ್ವಾಮೀಜಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮಾಜಿ ಪಾಲಿಕೆ ಸದಸ್ಯರಾದ ಎಂ.ವಿ. ರಾಮ್‌ಪ್ರಸಾದ್, ಮುಖಂಡರಾದ ಜಗದೀಶ್, ಕೇಬಲ್ ಮಹೇಶ್, ಅಪೂರ್ವ ಸುರೇಶ್, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಸೇರಿದಂತೆ ನಂದೀಶ್ ನಾಯಕ, ಟಿ.ಎಸ್. ಅರುಣ್, ದೂರ ರಾಜಣ್ಣ, ಆನಂದ್, ಶಿವಲಿಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
