ನವದೆಹಲಿ, ನವೆಂಬರ್ 21, 2025 : ಭಾರತದಲ್ಲೇ ಜನಿಸಿದ ಮುಖಿ ಎಂಬ ಹೆಣ್ಣು ಚೀತಾಗೆ ಐದು ಮರಿಗಳು ಜನನವಾಗಿದ್ದು, ಚೀತಾಗಳ ಸಂತಾನಾಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ.
ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತಾನಾಭಿವೃದ್ಧಿ ದೃಷ್ಟಿಯಿಂದ ದೂರದ ಆಫ್ರಿಕಾದಿಂದ ಕಳೆದ 2022ರ ಸೆಪ್ಟೆಂಬರ್ ನಲ್ಲಿ 20 ಚೀತಾಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು.
ನಮೀಬಿಯಾದಿಂದಲೂ 2023ರ ಫೆಬ್ರವರಿಯಲ್ಲಿ 12 ಚೀತಾಗಳನ್ನು ತರಿಸಲಾಗಿತ್ತು. ಅದಾದ ಮೂರು ತಿಂಗಳಲ್ಲೇ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಒಂದು ಚೀತಾ ಹಾಗೂ ಮೂರು ಮರಿಗಳು ಸಾವನ್ನಪ್ಪಿದ ಕಾರಣ ಚೀತಾ ಸಂತತಿ ಅಭಿವೃದ್ಧಿ ಯೋಜನೆಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ನಂತರದ ದಿನಗಳಲ್ಲಿ 16 ಮರಿಗಳು ಭಾರತದಲ್ಲಿ ಜನಿಸುವ ಮೂಲಕ ಚೀತಾಗಳ ಸಂತತಿ ಹೆಚ್ಚುತ್ತಾ ಸಾಗಿತ್ತು. ಈ ಪೈಕಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವದಲ್ಲಿ ಜನಿಸಿದ ಮುಖಿ ಎಂಬ ಹೆಸರಿನ ಹೆಣ್ಣು ಚೀತಾ ಇದೀಗ ಒಮ್ಮೆಲೆ ಐದು ಮರಿಗಳಿಗೆ ಜನ್ಮ ನೀಡಿದೆ.
ಚೀತಾಗಳ ಸಂತತಿಯನ್ನು ಅಭಿವೃದ್ಧಿ ಮಾಡಬೇಕೆಂಬ ಯೋಜನೆ ಅನುಷ್ಠಾನದ ಬಳಿಕ ಭಾರತದಲ್ಲಿ ಜನಿಸಿದ ಮೊದಲ ಹೆಣ್ಣು ಚೀತಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮುಖಿ, ಇದೀಗ ಐದು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಇಲ್ಲೇ ಹುಟ್ಟಿ ಬೆಳೆದು ಮರಿಗಳಿಗೆ ಜನ್ಮ ನೀಡಿದ ಮೊದಲ ಚೀತಾ ಎಂಬ ಖ್ಯಾತಿಗೂ ಮುಖಿ ಪಾತ್ರವಾಗಿದೆ.
2 ವರ್ಷ 11 ತಿಂಗಳ ಮುಖಿ ಚೀತಾ ಹಾಗು ಐದು ಮರಿಗಳು ಆರೋಗ್ಯವಾಗಿವೆ. ಭಾರತದಲ್ಲಿ ಸಂಪೂರ್ಣವಾಗಿ ನಶಿಸಿ ಹೋಗಿದ್ದ ಚೀತಾಗಳನ್ನು ದೇಶದ ಕೆಲವೇ ಮೃಗಾಲಯಗಳಲ್ಲಿ ಕಾಣಬಹುದಾಗಿತ್ತು.ಇದೀಗ ಅರಣ್ಯ ಪ್ರದೇಶದಲ್ಲೇ ಚೀತಾಗಳ ಸಂತಾನಾಭಿವೃದ್ಧಿ ಆಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
