ಮೈಸೂರು, ಜುಲೈ 22, 2026 : ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶಾಸಕ ಕೆ.ಹರೀಶ್ ಗೌಡ ಮಹಾನಗರ ಪಾಲಿಕೆಯ ವಾರ್ಡ್ ನಂ.42ರ ಕೆ.ಜಿ.ಕೊಪ್ಪಲು ವ್ಯಾಪ್ತಿಯಲ್ಲಿ ಜನರ ಮನೆ ಬಾಗಿಲಿಗೆ ಶಾಸಕರು ಕಾರ್ಯಕ್ರಮದ ಭಾಗವಾಗಿ ಪಾದಯಾತ್ರೆ ನಡೆಸಿದರು.
ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಡ್ ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಬೆಳಗ್ಗೆ 8:45ಕ್ಕೆ ಪಾದಯಾತ್ರೆಗೆ ಚಾಲನೆ ನೀಡಿದರು. ವಾರ್ಡ್ನ ಪ್ರತಿಯೊಂದು ಮನೆಗೆ ಭೇಟಿ ನೀಡಿ ನಾಗರಿಕರ ಅಹವಾಲುಗಳನ್ನು ಆಲಿಸಿದರು.
ಕುಡಿಯುವ ನೀರಿನ ಸಮಸ್ಯೆ: ರೈಲ್ವೆ ಗೇಟ್ ಹಿಂಭಾಗದ ನಿವಾಸಿಗಳು ಹಾಗೂ ಮಹಿಳೆಯರು ವಾರ್ಡ್ನಲ್ಲಿ ಸರಿಯಾಗಿ ನೀರು ಸರಬರಾಜಾಗದಿರುವ ಬಗ್ಗೆ ಮತ್ತು ಹಬ್ಬದ ದಿನಗಳಲ್ಲೂ ನೀರಿನ ಅಭಾವ ಉಂಟಾಗುತ್ತಿರುವ ಬಗ್ಗೆ ದೂರಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು, ಸ್ಥಳದಲ್ಲೇ ಇದ್ದ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಇಇ ಮೋಹನ್ ಕುಮಾರ್ ಹಾಗೂ ಎಇಇ ಮುಸ್ತಫಾ ಅವರಿಗೆ ತಕ್ಷಣ ಸೂಕ್ತ ಕ್ರಿಯಾ ಯೋಜನೆ ತಯಾರಿಸಿ ನೀರಿನ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದರು.
ವಿದ್ಯುತ್ ಹಾಗೂ ಬೀದಿ ದೀಪ: ಕೆ.ಜಿ.ಕೊಪ್ಪಲು ಹಳೆಯ ಗ್ರಾಮವಾಗಿರುವುದರಿಂದ ವಾಲಿಕೊಂಡಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲು ಹಾಗೂ ಹೊಸ ಬೀದಿ ದೀಪಗಳನ್ನು ಅಳವಡಿಸಲು ಸ್ಥಳದಲ್ಲಿದ್ದ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ, ಚರಂಡಿ, ಅಭಿವೃದ್ಧಿ ಕಾಮಗಾರಿ: ರಸ್ತೆ ಸಮತಟ್ಟಿಲ್ಲದಿರುವುದು, ಚರಂಡಿ ಸಮಸ್ಯೆ ಹಾಗೂ ನೈರ್ಮಲ್ಯಕ್ಕೆ ಸಂಬAಧಿಸಿದ ದೂರುಗಳನ್ನು ಪರಿಶೀಲಿಸಿದ ಶಾಸಕರು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದರೆ, ಉಳಿದ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಸಾಮಾಜಿಕ ಭದ್ರತೆ: ಪಿಂಚಣಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಇತರ ದಾಖಲೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಕಂದಾಯಾಧಿಕಾರಿಗಳು ಮತ್ತು ವಲಯ ಆಯುಕ್ತರ ಮೂಲಕ ಸ್ಥಳದಲ್ಲೇ ಪರಿಶೀಲಿಸಿ ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಎಸ್‌ಇ ಸಿಂಧು, ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್, ವಾಣಿ ವಿಲಾಸ್ ನೀರು ಸರಬರಾಜು ವಿಭಾಗದ ಮೋಹನ್ ಕುಮಾರ್, ಎಇಇ ಮುಸ್ತಫಾ, ವಲಯ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ವಲಯ ಆಯುಕ್ತ ಸಂದೀಪ್, ಇಂಜಿನಿಯರ್‌ಗಳಾದ ಮಧುಸೂದನ್, ತೇಜಸ್ವಿನಿ ಹಾಗೂ ಚೆಸ್ಕಾಂ, ಕಂದಾಯ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ವಾರ್ಡ್ ಅಧ್ಯಕ್ಷ ಹರೀಶ್, ಸ್ಥಳೀಯ ಮುಖಂಡರಾದ ರಾಜಣ್ಣ, ಭಾಸ್ಕರ್, ಬಸವರಾಜು, ಬರಕ್ಕಿ ಮಾದೇವಣ್ಣ, ಚೆನ್ನಪ್ಪ, ನಾಗಣ್ಣ, ಬಂದೀಗೌಡ್ರು, ಕುಮಾರಣ್ಣ (ದತ್ತು), ಶ್ರೀನಿವಾಸ್, ಪ್ರದೀಪ್ (ದೀಪು), ಗಿರೀಶ್, ಮಹೇಶ್, ಚಂದ್ರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
