ಹೆಚ್.ಡಿ.ಕೋಟೆ, ಫೆಬ್ರವರಿ 10, 2026 : ತಾಲ್ಲೂಕಿನ ಮಾದಾಪುರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆಯೇ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅರಣ್ಯ ಮತ್ತು ವಿಹಾರ ಧಾಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು ರವರು ಮಕ್ಕಳಿಗೆ ಸ್ವತಃ ಮಾತ್ರೆಗಳನ್ನು ನೀಡುವ ಮೂಲಕ ಈ ಅಭಿಯಾನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಅಭಿಯಾನ ಅತ್ಯಂತ ಪ್ರಮುಖವಾಗಿದೆ. ತಾಲ್ಲೂಕಿನ ಪ್ರತಿ ಅಂಗನವಾಡಿ ಮತ್ತು ಶಾಲೆಯ ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆ ನೀಡಿ, ಈ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಟಿ. ಅವರು ಮಾಹಿತಿ ನೀಡಿ, “ರಾಜ್ಯಾದ್ಯಂತ ಇಂದು ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. ಎಚ್.ಡಿ.ಕೋಟೆ ತಾಲ್ಲೂಕಿನ 252 ಅಂಗನವಾಡಿಗಳ 7,355 ಮಕ್ಕಳು ಹಾಗೂ 151 ಶಾಲೆಗಳ 21,735 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಇಂದು ಮಾತ್ರೆ ಪಡೆಯಲು ಸಾಧ್ಯವಾಗದ ಅಥವಾ ಬಿಟ್ಟುಹೋದ ಮಕ್ಕಳಿಗೆ ಫೆಬ್ರವರಿ 16 ರಂದು ‘ಮಾಪ್ ಅಪ್ ಡೇ’ ಮೂಲಕ ಮಾತ್ರೆ ವಿತರಿಸಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಸದಸ್ಯ ಪ್ರದೀಪ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಮುಖಂಡರಾದ ಮಂಚಯ್ಯ, ಮಾಜಿ ಅಧ್ಯಕ್ಷ ದಿನೇಶ್, ವೈದ್ಯಾಧಿಕಾರಿ ಡಾ. ಚಂದ್ರಕಲಾ, ಆರೋಗ್ಯ ಸಿಬ್ಬಂದಿಗಳಾದ ರವಿರಾಜ್, ದೊರೆ, ಜಯಂತಿ, ಶಶಿಕಲಾ ಹಾಗೂ ಗ್ರಾಮದ ಮುಖಂಡರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
