ನವದೆಹಲಿ, ನವೆಂಬರ್ 13, 2025 : ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ.
ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿತ್ತಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಯೋಜನೆಗೆ ಮುಂದುವರೆಯಲು ಕರ್ನಾಟಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (DPR) ನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ದಿಂದ ಬರಬೇಕು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ತಮಿಳುನಾಡಿನ ಮನವಿಯನ್ನು ತಪ್ಪಾಗಿ ಗ್ರಹಿಸಲಾಗಿದೆ, ರಾಜ್ಯವು ಆದೇಶವನ್ನು ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿರುವ ತಜ್ಞರ ಸಮಿತಿಯನ್ನು ಸಂಪರ್ಕಿಸಬೇಕಾಗಿತ್ತು ಎಂದು ಹೇಳಿತು.
ಕೇಂದ್ರ ಜಲ ಆಯೋಗದ ನಿರ್ದೇಶನಗಳು ತಜ್ಞರ ಶಿಫಾರಸುಗಳನ್ನು ಆಧರಿಸಿವೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮೋದನೆಗಳು ವಿವರವಾದ ಯೋಜನಾ ವರದಿ ಅನುಮೋದನೆಗೆ ಪೂರ್ವಾಪೇಕ್ಷಿತವಾಗಿದೆ ಎಂದು ಪೀಠವು ಗಮನಿಸಿತು.
