ಮೈಸೂರು, ಫೆಬ್ರವರಿ 10, 2026: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬಹುಚರ್ಚಿತ 50:50 ಅನುಪಾತದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೆ ಮರುಜೀವ ಬಂದಿದ್ದು, ನಿವೇಶನ ಪಡೆದಿದ್ದವರು ಹಾಗೂ ಮಾರಾಟ ಮಾಡಿದವರಲ್ಲಿ ಆತಂಕ ಶುರುವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆತ ಬೆನ್ನಲ್ಲೇ, ಲೋಕಾಯುಕ್ತ ಪೊಲೀಸರು ಈಗ ಇತರ 134 ಪ್ರಕರಣಗಳತ್ತ ತಮ್ಮ ತನಿಖಾ ದೃಷ್ಟಿ ನೆಟ್ಟಿದ್ದಾರೆ.
1055 ಸೈಟ್‌ಗಳ ಹಂಚಿಕೆ ಮೇಲೆ ತನಿಖಾ ಹದ್ದಿನ ಕಣ್ಣು: ಕಾನೂನು ಗಾಳಿಗೆ ತೂರಿ ನಡೆದಿದೆ ಎನ್ನಲಾದ ಒಟ್ಟು 1055 ಸೈಟ್‌ಗಳ ಹಂಚಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ, ತನಿಖೆಯನ್ನು ಚುರುಕುಗೊಳಿಸಿದೆ. ಮೊದಲ ಹಂತವಾಗಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಎನ್ನಲಾದ 40 ಮಂದಿಗೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಮುಡಾ ಆಯುಕ್ತರಾದ ದಿನೇಶ್ ಹಾಗೂ ನಟೇಶ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರಿರುವುದು ತೀವ್ರ ಕುತೂಹಲ ಕೆರಳಿಸಿದೆ.
ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ: “ನೀವು ಸೈಟ್ ಪಡೆದುಕೊಂಡಿದ್ದು ಹೇಗೆ? ನಿಮ್ಮ ಮೂಲ ಜಮೀನು ದಾಖಲೆಗಳೇನು? ಹಂಚಿಕೆಯ ಪ್ರಕ್ರಿಯೆ ಸರಿಯಾಗಿದೆಯೇ?” ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಲೋಕಾಯುಕ್ತ ನೋಟಿಸ್‌ನಲ್ಲಿ ಕೇಳಲಾಗಿದೆ. ಸೈಟ್ ಪಡೆದವರು ಹಾಗೂ ಸೈಟ್ ಮಂಜೂರು ಮಾಡಿದ ಅಧಿಕಾರಿಗಳು ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಮತ್ತು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮುಡಾ ಇತಿಹಾಸದಲ್ಲೇ ದೊಡ್ಡ ಹಗರಣ ಎನ್ನಲಾದ ಈ ಪ್ರಕರಣದಲ್ಲಿ ಸೈಟ್ ಕಳೆದುಕೊಳ್ಳುವ ಭೀತಿ ಈಗ ಅನೇಕರನ್ನು ಕಾಡುತ್ತಿದೆ. ಮೊದಲ ಹಂತದಲ್ಲಿ 40 ಜನರಿಗೆ ನೋಟಿಸ್ ಹೋಗಿದ್ದು, ಉಳಿದವರಿಗೂ ಶೀಘ್ರದಲ್ಲೇ ಲೋಕಾಯುಕ್ತದಿಂದ ಬುಲಾವ್ ಬರುವ ಸಾಧ್ಯತೆ ದಟ್ಟವಾಗಿದೆ.
