ಹೆಚ್ ಡಿ ಕೋಟೆ, ಜನವರಿ 29, 2026 :ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೃಷ್ಣ ಅವರ ಜಮೀನಿನಲ್ಲಿ ಈ ಚಿರತೆ ಕಾಣಿಸಿಕೊಂಡಿದ್ದು, ಅದರ ಓಡಾಟವನ್ನು ಅಲ್ಲಿನ ಜನರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.

ಜನವಸತಿ ಹಾಗೂ ಕೃಷಿ ಭೂಮಿಯ ಸೀಮೆಯಲ್ಲೇ ಚಿರತೆ ಬೀಡುಬಿಟ್ಟಿರುವುದರಿಂದ ರೈತರು ಜಮೀನಿಗೆ ಹೋಗಲು ಭಯಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಕೂಡಲೇ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಜನರ ಪ್ರಾಣ ಮತ್ತು ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
