ಮೈಸೂರು, ಏಪ್ರಿಲ್ 18, 2026 : ಸಾಂಸ್ಕೃತಿಕ ನಗರಿಯ ತಹಶಿಲ್ದಾರ್ ಕಚೇರಿ ಇಂದು ವಕೀಲರು ಮತ್ತು ತಹಶಿಲ್ದಾರ್ ನಡುವಿನ ತೀವ್ರ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ವಕೀಲ ರಂಜಿತ್ ಹಾಗೂ ತಹಶಿಲ್ದಾರ್ ಮಹೇಶ್ ನಡುವೆ ನಡೆದ ಈ ವಾಕ್ಸಮರ ಕಚೇರಿ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಿಸಿತ್ತು.

ಕಚೇರಿಯ ಮುಂಭಾಗದ ಬಾಗಿಲನ್ನು ಮುಚ್ಚಿ, ಹಿಂಬಾಗಿಲಿನ ಮೂಲಕ ಓಡಾಟ ನಡೆಸುತ್ತಿದ್ದಕ್ಕೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ವಕೀಲ ರಂಜಿತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಜನರ ಸೇವೆ ಮಾಡಬೇಕಾದವರು ಮುಂಬಾಗಿಲು ಹಾಕಿಕೊಂಡು ಒಳಗೆ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ ವಕೀಲರು, ಸಾರ್ವಜನಿಕರಿಗೆ ಒಳಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ, ತಹಶಿಲ್ದಾರ್ ಮಹೇಶ್ ಅವರು ಇದಕ್ಕೆ ನಿರಾಕರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ತಹಶಿಲ್ದಾರ್ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ವಕೀಲರು ಕಚೇರಿಯ ಒಳಗೆ ನುಗ್ಗಿದರು. ಈ ವೇಳೆ ತಹಶಿಲ್ದಾರ್ ಅವರು, “ನೀವು ನಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಿ” ಎಂದು ಮರು ಉತ್ತರ ನೀಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಶ್ನಿಸುತ್ತಿರುವುದಾಗಿ ವಕೀಲರು ವಾದಿಸಿದರೆ, ನಿಯಮದಂತೆ ಕೆಲಸ ಮಾಡುತ್ತಿರುವುದಾಗಿ ಅಧಿಕಾರಿಗಳು ಸಮರ್ಥಿಸಿಕೊಂಡರು. ಈ ಘಟನೆಯಿಂದಾಗಿ ತಹಶಿಲ್ದಾರ್ ಕಚೇರಿಗೆ ಬಂದಿದ್ದ ಸಾರ್ವಜನಿಕರು ಕೆಲಕಾಲ ಗೊಂದಲಕ್ಕೀಡಾದರು.
