ಪಿರಿಯಾಪಟ್ಟಣ, ಜನವರಿ 12, 2026 : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚೆಗಷ್ಟೇ ಅಡಿಕೆ ತೋಟಗಳಲ್ಲಿ ಹಸಿ ಅಡಿಕೆ ಕಳ್ಳತನ ಮಾಡಿ ಸುದ್ದಿಯಾಗಿದ್ದ ಖದೀಮರ ಗ್ಯಾಂಗ್, ಈಗ ಹೊಸದಾಗಿ ಆರಂಭಿಸಲಾಗಿದ್ದ ಮೊಬೈಲ್ ಅಂಗಡಿಯೊಂದಕ್ಕೆ ಕನ್ನ ಹಾಕಿದೆ.

ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಅಂಗಡಿಯ ಬಾಗಿಲು ಮುರಿದು ಒಳನುಗ್ಗಿ ಸುಮಾರು 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಿದ್ದಾರೆ.
ಖದೀಮರು ಬಾಗಿಲು ಮುರಿಯುತ್ತಿರುವ ಮತ್ತು ಕಳ್ಳತನ ಮಾಡುತ್ತಿರುವ ಸಂಪೂರ್ಣ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಬೈಲಕುಪ್ಪೆ ಪ್ರದೇಶವನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ಮಾಡುತ್ತಿರುವ ಈ ತಂಡದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
