ಮೈಸೂರು, ನವೆಂಬರ್ 18, 2025 : ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾಫಿಯಾ ಸದ್ದಿಲ್ಲದೆ ತಲೆ ಎತ್ತುತ್ತಿದೆಯೇ ಎಂಬ ಅನುಮಾನಗಳು ಸ್ಥಳೀಯರಲ್ಲಿ ಮೂಡಿವೆ. ನಗರದ ಕೆಲವು ಬಡಾವಣೆಗಳಲ್ಲಿ ಕಗ್ಗತ್ತಲಿನಲ್ಲಿ ಯುವಕರ ಗುಂಪೊಂದು ಗಾಂಜಾ ಸೇವನೆ ಮಾಡಿ ಪುಂಡಾಟಿಕೆ ನಡೆಸುತ್ತಿರುವುದು ವರದಿಯಾಗಿದೆ.

ಮೈಸೂರಿನ ಪ್ರಮುಖ ವಸತಿ ಪ್ರದೇಶಗಳಾದ ಕ್ಯಾತಮಾರನಹಳ್ಳಿ ಮತ್ತು ಗಾಯತ್ರಿಪುರಂ ಪ್ರಸ್ತುತ ಗಾಂಜಾ ಗಿರಾಕಿಗಳ ಅಡ್ಡೆಗಳಾಗಿ ಮಾರ್ಪಡುತ್ತಿವೆ ಎಂದು ಹೇಳಲಾಗುತ್ತಿದೆ. ತಡರಾತ್ರಿ ಈ ಪ್ರದೇಶಗಳಲ್ಲಿನ ಬೇಲಿ ಮರೆ ಮತ್ತು ಕಗ್ಗತ್ತಲ ಪ್ರದೇಶಗಳಲ್ಲಿ ಯುವಕರು ಗುಂಪುಗೂಡಿ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಕಿರಿಕಿರಿ:
ಗಾಂಜಾ ಸೇವನೆ ಬಳಿಕ ಯುವಕರ ಗುಂಪುಗಳು ‘ಧಮ್ ಮಾರೋ ಧಮ್’ ಎಂದು ಫುಲ್ ಜೂಮಿನಲ್ಲಿ ಅಡ್ಡಾಡುತ್ತಿದ್ದು, ಸಾರ್ವಜನಿಕರಿಗೆ ಕೀಟಲೆ ನೀಡುತ್ತಿದ್ದಾರೆ.ಗಾಂಜಾ ಸೇವಿಸಿ ಪುಂಡಾಟ ನಡೆಸುವ ಈ ಗುಂಪುಗಳು, ಯಾರಾದರೂ ಪ್ರಶ್ನೆ ಮಾಡಿದರೆ ಅವರ ಮೇಲೆಯೇ ಹಲ್ಲೆಗೆ ಮುಂದಾಗುತ್ತಿದ್ದಾರೆ. ಇವರನ್ನು ಹಿಡಿಯಲು ಹೋಗುವವರ ಮೇಲೆಯೂ ದಾಳಿಗೆ ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇನ್ನೂ ಚಿಕ್ಕ ವಯಸ್ಸಿನ ಯುವಕರು ಕೂಡ ಗಾಂಜಾ ಸೇವನೆಯನ್ನು ಚಟವನ್ನಾಗಿ ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ಇಲಾಖೆ ಮೌನ?:
ನಗರದ ಹೃದಯಭಾಗದಲ್ಲೇ ಇಂತಹ ಚಟುವಟಿಕೆಗಳು ಸದ್ದಿಲ್ಲದೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಈ ಗಾಂಜಾ ಗಿರಾಕಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಯುವಜನತೆಯ ಭವಿಷ್ಯವನ್ನು ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
