ನವದೆಹಲಿ, ನವೆಂಬರ್ 24, 2025 : ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಸೋಮವಾರ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಮಾಣ ಸ್ವೀಕರಿಸಿದ್ದಾರೆ. ಹಿಂದಿನ ಸಿಜೆಐ ಬಿಆರ್ ಗವಾಯ್ (CJI BR Gavai) ಅವರು ನಿನ್ನೆ ಭಾನುವಾರ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ 63 ವರ್ಷದ ನ್ಯಾ| ಸೂರ್ಯ ಕಾಂತ್ ಅವರು ಆಯ್ಕೆಯಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದರು. ದೀರ್ಘಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಂವಿಧಾನಿಕ ಪೀಠಗಳನ್ನು ಸದ್ಯದಲ್ಲೇ ಅವರು ರಚಿಸಲಿದ್ದಾರೆ. ಐದು ಸದಸ್ಯರ ಪೀಠ, ಏಳು ಮತ್ತು ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠಗಳನ್ನು ಮುಂದಿನ ಕೆಲ ವಾರಗಳಲ್ಲಿ ರಚಿಸುವುದಾಗಿ ನೂತನ ಸಿಜೆಐ ಮಾಹಿತಿ ನೀಡಿದ್ದಾರೆ.
1962ರ ಫೆಬ್ರುವರಿ 10ರಂದು ಜನಿಸಿದ ಹರ್ಯಾಣ ಮೂಲದ ನ್ಯಾ| ಸೂರ್ಯಕಾಂತ್ ಅವರು 1984ರಲ್ಲಿ ಕಾನೂನು ವೃತ್ತಿ ಆರಂಭಿಸಿದರು. 2000ರಲ್ಲಿ ಅವರು ಹರ್ಯಾಣದ ಅತಿಕಿರಿಯ ಅಡ್ವೊಕೇಟ್ ಜನರಲ್ ಎನ್ನುವ ದಾಖಲೆ ನಿರ್ಮಿಸಿದರು. 2001ರಲ್ಲಿ ಹಿರಿಯ ಅಡ್ವೊಕೇಟ್ ಆದರು. 2004ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ಜಡ್ಜ್ ಆಗಿ ಬಡ್ತಿ ಪಡೆದರು. ನಂತರ, ಹಿಮಾಚಲಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಧೀಶರಾದರು. ಅದಾದ ಬಳಿಕ 2019ರಲ್ಲಿ ಸುಪ್ರೀಂಕೋರ್ಟ್ಗೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2024ರಿಂದ ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.
