ಬೆಂಗಳೂರು, ಜುಲೈ 8, 2026 : ಮುಂಗಾರು ಮಳೆ ತೀವ್ರಗೊಂಡಿದ್ದು, ಬತ್ತಿ ಹೋಗುತ್ತಿದ್ದ ಪ್ರಮುಖ ನದಿ ಹಾಗೂ ಜಲಾಶಯಗಳಿಗೆ ಕೊನೆಗೂ ಜೀವಕಳೆ ಬಂದಿದೆ.
ಹಳೇ ಮೈಸೂರು ಭಾಗದ ಜೀವನಾಡಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ಬಳಿಕ ಉತ್ತಮ ಒಳಹರಿವು ದಾಖಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂಗೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಸದ್ಯ 124.80 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ನೀರಿನ ಮಟ್ಟ 80.90 ಅಡಿ ದಾಟಿದ್ದು, ಸುಮಾರು 4,291 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಸದ್ಯದ ಒಟ್ಟು ಸಂಗ್ರಹ 11.487 ಟಿಎಂಸಿ ಇದ್ದು, ಇದರಲ್ಲಿ ಬಳಸಬಹುದಾದ ನೀರು ಕಡಿಮೆ ಇದ್ದರೂ ಸಹ, ನಿರಂತರ ಮಳೆಯಿಂದಾಗಿ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರುವ ನಿರೀಕ್ಷೆಯಿದೆ. ಇದು ಕಾವೇರಿ ಕೊಳ್ಳದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕೆಆರ್‌ಎಸ್ ಮಾತ್ರವಲ್ಲದೆ ಕಾವೇರಿ ಕೊಳ್ಳದ ಇತರ ಪ್ರಮುಖ ಜಲಾಶಯಗಳಾದ ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳಿಗೆ ಒಳಹರಿವಿನ ಪ್ರಮಾಣ ದುಪ್ಪಟ್ಟಾಗಿದೆ. ಹಾಸನದ ಹೇಮಾವತಿ ಜಲಾಶಯಕ್ಕೆ 6,294 ಕ್ಯೂಸೆಕ್ ಹಾಗೂ ಎಚ್.ಡಿ. ಕೋಟೆಯ ಕಬಿನಿ ಜಲಾಶಯಕ್ಕೆ 5,774 ಕ್ಯೂಸೆಕ್ ಒಳಹರಿವು ಇದ್ದು, ಕಾವೇರಿ ನದಿ ಪಾತ್ರದಲ್ಲಿ ನೀರಿನ ಮಟ್ಟ ವೇಗವಾಗಿ ಹೆಚ್ಚುತ್ತಿದೆ. ಇತ್ತ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆ ರಣಭೀಕರ ರೂಪ ಪಡೆದಿದ್ದು, ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯಕ್ಕೆ ದಾಖಲೆಯ 18,486 ಕ್ಯೂಸೆಕ್ ಹಾಗೂ ಭದ್ರಾ ಜಲಾಶಯಕ್ಕೆ 4,135 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಉತ್ತರ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9.379 ಟಿಎಂಸಿ ನೀರಿದ್ದು, ಮಳೆ ಬಿರುಸುಗೊಂಡಿರುವುದರಿಂದ ಒಳಹರಿವು ಆರಂಭವಾಗಿದೆ.
