ಮೈಸೂರು, ನವೆಂಬರ್ 25, 2025 : ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆ ಮತ್ತು ಮೈಸೂರು ನಗರದ ಅಪರಾಧ ನಿಯಂತ್ರಣ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಗಳ ಅಗತ್ಯದ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು, ವಿಶೇಷವಾಗಿ ಆನ್‌ಲೈನ್ ವಂಚನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ತನಿಖೆಗಾಗಿ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ಮಾಡುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಉದಯಗಿರಿ ಪೊಲೀಸ್ ಠಾಣೆಯನ್ನು ಈಗಾಗಲೇ ಎರಡು ವಿಭಾಗಗಳನ್ನಾಗಿ ಮಾಡಿದ್ದೇವೆ. ಇನ್ನು ಎಷ್ಟು ಹೆಚ್ಚುವರಿ ಠಾಣೆಗಳು ಬೇಕೆಂಬ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸುತ್ತೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದರು.
ಸೈಬರ್ ಅಪರಾಧಗಳ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.ಮೈಸೂರಿನಲ್ಲಿ ಈ ವರ್ಷವೇ ಬರೋಬ್ಬರಿ 30 ಕೋಟಿ ರೂಪಾಯಿಗಳ ಆನ್‌ಲೈನ್ ಫ್ರಾಡ್ ನಡೆದಿದೆ. ರಾಜ್ಯದಲ್ಲಿ ಆನ್‌ಲೈನ್ ಫ್ರಾಡ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಯುತ್ತಿದ್ದು, ವಿದ್ಯಾವಂತರು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳೇ ವಂಚಕರ ಟಾರ್ಗೆಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಬ್ಬ ನಿವೃತ್ತ ಐಟಿ ಉದ್ಯೋಗಿ 32 ಕೋಟಿ ರೂಪಾಯಿ ಹಣವನ್ನು ಈ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆನ್‌ಲೈನ್ ಫ್ರಾಡ್ ತನಿಖೆಯ ಬಗ್ಗೆ ಪೊಲೀಸರಿಗೆ ಹೆಚ್ಚುವರಿ ತರಬೇತಿ ನೀಡುತ್ತಿದ್ದೇವೆ. ಎಲ್ಲಾ ಜಿಲ್ಲೆಗಳ ಪೊಲೀಸರಿಗೂ ಆನ್‌ಲೈನ್ ಫ್ರಾಡ್ ತನಿಖೆಯ ಬಗ್ಗೆ ತರಬೇತಿ ನೀಡಲು ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಪಿಎಸ್‌ಐ ಹಗರಣ ಆದ ಕಾರಣ ಪೊಲೀಸ್ ನೇಮಕಾತಿಯಲ್ಲಿ ವಿಳಂಬವಾಯಿತು. ಆದರೂ, ಪೊಲೀಸರ ನೇಮಕಾತಿಗಳನ್ನು ಸರ್ಕಾರ ತುರ್ತಾಗಿ ಮಾಡುತ್ತಿದೆ. ಈ ವರ್ಷ ಪೊಲೀಸ್ ನೇಮಕಾತಿಯನ್ನು ಹೆಚ್ಚು ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ರಾಜಕೀಯದ ಕುರಿತು ಮೌನ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಸ್ತುತ ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.ರಾಜ್ಯ ರಾಜಕೀಯದ ಯಾವ ಬೆಳವಣಿಗೆಯ ಬಗ್ಗೆಯೂ ನಾನು ಮಾತನಾಡೋದಿಲ್ಲ. ನಾನು ಮಾತನಾಡದೆ ಇರುವುದಕ್ಕೆ ನೀವು ಏನಾದರೂ ಅರ್ಥ ಕಲ್ಪಿಸಿಕೊಳ್ಳಿ. ನಾನು ಮಾತ್ರ ಏನನ್ನೂ ಮಾತನಾಡುವುದಿಲ್ಲ. ಬಹಳಷ್ಟು ಜನ ಈ ವಿಚಾರ ಕುರಿತು ಬಹಳಷ್ಟು ರೀತಿಯಲ್ಲಿ ಮಾತನಾಡಿದ್ದಾರೆ. ನಾನು ಪ್ರಸ್ತುತ ರಾಜಕೀಯದ ಯಾವ ಪ್ರಶ್ನೆಗಳಿಗೂ ಉತ್ತರ ಕೊಡುವುದಿಲ್ಲ. ಗೃಹ ಇಲಾಖೆಯ ಬಗ್ಗೆ ಏನು ಬೇಕಾದರೂ ಕೇಳಿ ಹೇಳುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
