ಮೈಸೂರು , ಡಿಸೆಂಬರ್ 10, 2025 : ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಮೊಟ್ಟೆಗಳ ರೇಟ್ ಗಗನಕ್ಕೇರಿದೆ. ಇದ್ರಿಂದಾಗಿ ಶಾಲಾ ಬಿಸಿಯೂಟದಲ್ಲಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ವಿತರಣೆ ಜವಾಬ್ದಾರಿ ಹೊತ್ತಿರೋ ಶಿಕ್ಷಕರಿಗೆ ಸಂಕಷ್ಟ ಎದುರಾಗಿದೆ.
ಕೇಕ್ ಗಳಿಗೆ ಹಾಗೂ ಇತರೆ ಪದಾರ್ಥಗಳಿಗೆ ಮೊಟ್ಟೆಗಳನ್ನು ಹೆಚ್ಚಾಗಿ ಬಳಸುತ್ತಾರೆ.ಕಳೆದ ಎರಡು ವಾರಗಳಿಂದೀಚೆಗೆ ಕೋಳಿ ಮೊಟ್ಟೆ ಧಾರಣೆಯಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಬಿಸಿಯೂಟದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶಿಕ್ಷಕರಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ.
ಹೊರಗಡೆ ಮೊಟ್ಟೆಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಮೊಟ್ಟೆ ದರವೂ ದಿಢೀರ್ ಎಂದು ಏರಿಕೆಯಾಗಿದೆ. ಆದರೆ, ಈ ಏರಿಕೆಯ ದರವನ್ನು ಹೊಂದಾಣಿಕೆ ಮಾಡಿಕೊಂಡು ಮಕ್ಕಳಿಗೆ ಮೊಟ್ಟೆಯನ್ನು ಕೊಡಬೇಕಾಗಿರುವುದರಿಂದ ಶಿಕ್ಷಕರು ತಮ್ಮ ಕೈಯಿಂದ ಹೆಚ್ಚುವರಿ ಹಣವನ್ನು ಸದ್ದಿಲ್ಲದೆ ಭರಿಸುತ್ತಿದ್ದಾರೆ.
ಸರ್ಕಾರವು ಬಿಸಿಯೂಟದ ಎಲ್ಲ ಸಾಮಗ್ರಿಗಳಿಗೂ ಇಂತಿಷ್ಟೇ ಹಣ ಎಂದು ನಿಗದಿ ಮಾಡಿದೆ. ಇದರ ಅನ್ವಯ ಮೊಟ್ಟೆ ಖರೀದಿಗೆ 5 ರೂಪಾಯಿ, ಸಾಗಾಣಿಕೆ ದರ 20 ಪೈಸೆ, ಮೊಟ್ಟೆಯನ್ನು ಸುಲಿಯುವುದಕ್ಕೆ 30 ಪೈಸೆ, ಇದಕ್ಕೆ ಅಡುಗೆ ಅನಿಲ ಖರ್ಚು 50 ಪೈಸೆ ಎಂದು ನಿಗದಿಗೊಳಿಸಿದೆ. ಅಂದರೆ ಮಾರುಕಟ್ಟೆಯಲ್ಲಿ ಖರೀದಿ ಮತ್ತು ಸಾಗಾಣಿಕೆ ದರ ಎರಡೂ ಸೇರಿದರೆ 5.20 ರೂಪಾಯಿ ನಿಗದಿಯಾಗಿದೆ. ಆದರೆ, ಪ್ರಸ್ತುತ ದಿನದಲ್ಲಿ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 7.50ರಿಂದ 8 ರೂಪಾಯಿವರೆಗೂ ದರ ಮುಟ್ಟಿದೆ. ಈ ಹೆಚ್ಚುವರಿ ಹಣವನ್ನು ಬಿಸಿಯೂಟದ ಜವಾಬ್ದಾರಿ ವಹಿಸಿಕೊಂಡಿರುವ ಮುಖ್ಯ ಶಿಕ್ಷಕರು ಮಾತನಾಡದೇ ತಮ್ಮ ಜೇಬಿನಿಂದಲೇ ತೆಗೆದುಕೊಡಬೇಕಾಗಿದೆ.
