ವಾಷಿಂಗ್ಟನ್: ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆಲ್ಲದೆ ಹೋದರೆ ಅಮೆರಿಕದ ಪ್ರಜಾಪ್ರಭುತ್ವ ಅಂತ್ಯಗಾಣುವ ಸಾಧ್ಯತೆ ಇದೆ ಎಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ತಾವು ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾದರೆ ಹೋದರೆ ಇಡೀ ದೇಶಾದ್ಯಂತ ‘ರಕ್ತಪಾತ’ವೇ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡನ್ ಅವರ ಎದುರು ತಾವು ಸೋಲು ಕಂಡ ಫಲಿತಾಂಶವು ಚುನಾವಣಾ ವಂಚನೆಯ ಪರಿಣಾಮ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಅಧ್ಯಕ್ಷೀಯ ಚುನಾವಣೆಯು ಅಮೆರಿಕದ ಇತಿಹಾಸದಲ್ಲಿ ‘ಅತ್ಯಂತ ಮಹತ್ವದ ದಿನ’ ಎಂದು ಹೇಳಿದ್ದಾರೆ.
“ನಾವು ಈ ಚುನಾವಣೆಯಲ್ಲಿ ಗೆಲ್ಲದೆ ಹೋದರೆ, ಈ ದೇಶದಲ್ಲಿ ನೀವು ಮತ್ತೊಂದು ಚುನಾವಣೆ ನೋಡುತ್ತೀರಿ ಎಂದು ನನಗೆ ಅನಿಸುತ್ತಿಲ್ಲ” ಎಂದು ಡೇಯ್ಟನ್ನಲ್ಲಿ ನಡೆದ ಹೊರಾಂಗಣ ಪ್ರಚಾರ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ.
ಬಳಿಕ ಟ್ರಂಪ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದ ‘ಎಕ್ಸ್’ ವೇದಿಕೆಯಲ್ಲಿ ಸ್ಪಷ್ಟನೆ ನೀಡಿರುವ ಅವರ ಪ್ರಚಾರ ತಂಡ, ಟ್ರಂಪ್ ಅವರ ‘ರಕ್ತಪಾತ’ ಹೇಳಿಕೆಯು ಅಮೆರಿಕ ಆಟೋ ಉದ್ಯಮ ಹಾಗೂ ಆರ್ಥಿಕತೆ ಕುರಿತಾದ ಚರ್ಚೆಯ ನಡುವೆ ಬಂದಿದೆ ಎಂದಿದೆ.