ಮಂಡ್ಯ, ಫೆಬ್ರವರಿ 24, 2026: ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಬಳಿ ಮಾನವೀಯತೆಯನ್ನೇ ಮರೆಸುವಂತಹ ಭೀಕರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬನ ಮೇಲೆ ಕಿಡಿಗೇಡಿಗಳ ಗುಂಪು ಸೈಜುಗಲ್ಲಿನಿಂದ ಜಜ್ಜಿ ಅತ್ಯಂತ ಕ್ರೂರವಾಗಿ ದೌರ್ಜನ್ಯ ಎಸಗಿದೆ.

ತಪ್ಪು ಮಾಡಿದ್ದಾನೆ ಎಂಬ ನೆಪವೊಡ್ಡಿ ವ್ಯಕ್ತಿಯ ಬಟ್ಟೆ ಬಿಚ್ಚಿಸಿ, ಆತ ಕೈಮುಗಿದು ಪ್ರಾಣಭಿಕ್ಷೆ ಬೇಡಿದರೂ ಬಿಡದ ಕಿರಾತಕರು ಆತನ ಕಾಲುಗಳ ಮೇಲೆ ಸೈಜುಗಲ್ಲುಗಳನ್ನು ಎತ್ತಿ ಹಾಕಿ ವಿಕೃತಿ ಮೆರೆದಿದ್ದಾರೆ. ಈ ಇಡೀ ಕೌರ್ಯವನ್ನು ಹಲ್ಲೆಕೋರರೇ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನಾಗರಿಕರನ್ನು ಬೆಚ್ಚಿಬೀಳಿಸಿವೆ.
ಮೈಸೂರು ಮೂಲದ ನವೀನ್ ಹಾಗೂ ಆತನ ಭಾವ ಹಲ್ಲೆಗೊಳಗಾದ ದುರ್ದೈವಿಗಳು. ಹುಡುಗಿ ನಾಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಈ ಭೀಕರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಕೆ.ಆರ್. ಪೇಟೆಯ ಬೊಮ್ಮಲಾಪುರ ಮೂಲದ ನಿಂಗಣ್ಣ ಎಂಬುವವರ ಮಗಳು ನಾಪತ್ತೆಯಾಗಿದ್ದು, ಈ ಮಿಸ್ಸಿಂಗ್ ಪ್ರಕರಣದಲ್ಲಿ ನವೀನ್ ಮತ್ತು ಆತನ ಭಾವ ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ, ನಾಪತ್ತೆಯಾದ ಹುಡುಗಿಯ ಸಹೋದರ ಸಂಜಯನ ಮೇಲೆ ನವೀನ್ ಗುಂಪಿನವರು ಈ ಹಿಂದೆ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಇದೇ ದ್ವೇಷವನ್ನು ಇಟ್ಟುಕೊಂಡು ಹುಡುಗಿಯ ಕಡೆಯವರು ಪ್ರತಿಕಾರ ತೀರಿಸಿಕೊಂಡಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ನವೀನನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (IPC 307) ಪ್ರಕರಣ ದಾಖಲಾಗಿದ್ದು, ಈಗಾಗಲೇ ಪ್ರಮುಖ ಆರೋಪಿ ಗಿರೀಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
