ಹೆಚ್.ಡಿ. ಕೋಟೆ: ಪಟ್ಟಣದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸ್ಟೇಷನರಿ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಪಟ್ಟಣದ ನಿವಾಸಿ ಲೊಕೇಶ್ ಅವರಿಗೆ ಸೇರಿದ ಈ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಂಗಡಿಯಾದ್ಯಂತ ವ್ಯಾಪಿಸಿದೆ.

ಈ ದುರ್ಘಟನೆಯಲ್ಲಿ ಅಂಗಡಿಯಲ್ಲಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಸ್ಟೇಷನರಿ ವಸ್ತುಗಳು, ಜೆರಾಕ್ಸ್ ಯಂತ್ರಗಳು ಹಾಗೂ ಪ್ರಿಂಟರ್‌ಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಅಂಗಡಿಗಳಿಗೆ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅಪಾಯ ತಪ್ಪಿದಂತಾಗಿದೆ.
