ಹೆಚ್.ಡಿ.ಕೋಟೆ, ಡಿಸೆಂಬರ್ 5, 2025 : ಅಭಿವೃದ್ಧಿ ಹೆಸರಲ್ಲಿ ಕಾಮಗಾರಿ ಆರಂಭಿಸಿ, ಅದನ್ನು ಅರ್ಧಕ್ಕೆ ನಿಲ್ಲಿಸಿರುವ ಪರಿಣಾಮವಾಗಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಮುಸ್ಕೆರೆ ಗ್ರಾಮದ ಜನರು ಕಳೆದ ಎಂಟು ತಿಂಗಳಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸೇತುವೆ ಕಾಮಗಾರಿಗೆಂದು ಅಗೆದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಓಡಾಡುವುದೇ ದುಸ್ತರವಾಗಿದೆ.

ಮುಸ್ಕೆರೆ ಗ್ರಾಮದಲ್ಲಿ ಹಳೆಯ ಸೇತುವೆ ಬದಲಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸುಮಾರು 8 ತಿಂಗಳ ಹಿಂದೆ ಆರಂಭಿಸಲಾಗಿತ್ತು. ಕಾಮಗಾರಿಗೆಂದು ರಸ್ತೆಯನ್ನು ಅಗೆದು ಸಿದ್ಧಪಡಿಸಿದ ನಂತರ, ಕಾರಣಾಂತರಗಳಿಂದ ಕಾಮಗಾರಿಯನ್ನು ದಿಢೀರನೇ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ, ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ವಾಹನ ಸಂಚಾರಕ್ಕೆ ಮತ್ತು ಗ್ರಾಮಸ್ಥರ ಓಡಾಟಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.
ಪ್ರಮುಖ ಗ್ರಾಮಗಳ ಸಂಪರ್ಕ ಕಡಿತದ ಭೀತಿ
ಈ ರಸ್ತೆಯು ಮುಸ್ಕೆರೆ ಗ್ರಾಮದಿಂದ ಹುಂಡಿಮಾಳ, ವಿಶ್ವಕರ್ಮ ಕಾಲೋನಿ, ಗದ್ದಿಗೆ ಮತ್ತು ಭಾರತೀಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ರಸ್ತೆಯು ಕೆಸರುಮಯವಾಗಿರುವುದರಿಂದ ಈ ಗ್ರಾಮಗಳ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರತಿನಿತ್ಯ ಶಾಲೆ, ಕೆಲಸ ಹಾಗೂ ಇತರೆ ಅಗತ್ಯಗಳಿಗಾಗಿ ಹೊರಹೋಗುವ ಗ್ರಾಮಸ್ಥರು ಕೆಸರು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಪರದಾಡುತ್ತಿದ್ದಾರೆ. ಕೆಸರಿನಿಂದ ತುಂಬಿದ ರಸ್ತೆಯ ಮಧ್ಯೆ ಆಗಾಗ ವಾಹನಗಳು ಸಿಲುಕಿಕೊಳ್ಳುತ್ತಿವೆ. ಟ್ರ್ಯಾಕ್ಟರ್‌ಗಳು ಅಥವಾ ಗ್ರಾಮಸ್ಥರು ಒಟ್ಟಾಗಿ ಶ್ರಮವಹಿಸಿ ಸಿಲುಕಿದ ವಾಹನಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಹಾಗೂ ರಸ್ತೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಸಂಬಂಧಪಟ್ಟ ಯಾರೊಬ್ಬರೂ ಈ ಬಗ್ಗೆ ಕಿಂಚಿತ್ತೂ ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾಮಗಾರಿ ಮುಂದುವರಿಸದಿದ್ದರೆ ಅಥವಾ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ” ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
