ಬೆಂಗಳೂರು, ನವೆಂಬರ್ 21, 2025 : ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೆ ಗುಡ್ ನ್ಯೂಸ್ ಕೊಟ್ಟಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಇರುವ ದಂಡ ಮೊತ್ತದ ಮೇಲೆ 50% ರಿಯಾಯಿತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದೆ. ಪ್ರಸ್ತುತ ಇರೋ ದಂಡ ಮೊತ್ತದ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು ಎಂದು ಸೂಚಿಸಲಾಗಿದೆ.
ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದ ಕಾರಣ, ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ. ವಾಹನ ಸವಾರರು ಆನ್‌ಲೈನ್ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ದಂಡ ಕಟ್ಟಬಹುದು ಎನ್ನಲಾಗಿದೆ.
ಇನ್ನೂ, ಸಂಚಾರ ಪೊಲೀಸ್ ಠಾಣೆಗಳು, ಮಾತ್ರವಲ್ಲದೆ ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ಫೈನ್ ವಿವರ ಪಡೆದು ಸಾರ್ವಜನಿಕರು ದಂಡ ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ. ಆನ್‌ಲೈನ್ ಮೂಲಕ ಫೈನ್ ಪಾವತಿ ಮಾಡುವವರು ಕರ್ನಾಟಕ ಸ್ಟೇಟ್ ಪೊಲೀಸ್ ಆ್ಯಪ್ ಬಿಟಿಪಿ ಮುಖಾಂತರವೂ ಖುದ್ದಾಗಿ ದಂಡ ಪಾವತಿಸಬಹುದಾಗಿದೆ.
