ಮೈಸೂರು, ಡಿಸೆಂಬರ್ 30, 2025 :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಮುಖ ವಿಷ್ಣು ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಭವ: ನಗರದ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯವು ಬಣ್ಣ ಬಣ್ಣದ ಹೂವುಗಳು ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸರ್ವಾಲಾಂಕೃತ ಭೂಷಿತನಾಗಿದ್ದ ಸ್ವಾಮಿಯ ದರ್ಶನ ಪಡೆದ ಭಕ್ತಸಮೂಹ ಪುನೀತರಾದರು. ಈ ಪವಿತ್ರ ದಿನದಂದು ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಭಕ್ತರು ದೀರ್ಘ ಸರತಿ ಸಾಲಿನಲ್ಲಿ ನಿಂತು ಭಕ್ತಿಯಿಂದ ಕಾದು ದೇವರ ದರ್ಶನ ಪಡೆದರು. ವಿಶೇಷವಾಗಿ ಮೋಕ್ಷ ಪ್ರಾಪ್ತಿಗಾಗಿ ದೇವಾಲಯದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ‘ಸ್ವರ್ಗದ ಬಾಗಿಲು’ ಮೂಲಕ ಭಕ್ತರು ಪ್ರವೇಶಿಸಿ, ‘ಗೋವಿಂದ ಗೋವಿಂದ’ ಎಂಬ ನಾಮಸ್ಮರಣೆ ಮಾಡುತ್ತಾ ಸಾಗಿದ್ದು ಭಕ್ತಿ ಪರವಶತೆಯನ್ನು ಮೂಡಿಸಿತ್ತು.

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದತ್ತ ವೆಂಕಟೇಶ್ವರನ ದರ್ಶನ: ಇತ್ತ ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಯೂ ಏಕಾದಶಿಯ ಸಂಭ್ರಮ ಕಳೆಗಟ್ಟಿತ್ತು. ಶ್ರೀ ದತ್ತ ವಿಜಯಾನಂದದತ್ತ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಆರಂಭವಾದವು. ದತ್ತ ವೆಂಕಟೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಭಕ್ತಗಣವೇ ಹರಿದುಬಂದಿತ್ತು. ಈ ಪೂಜಾ ಸಂಭ್ರಮವು ರಾತ್ರಿವರೆಗೂ ಮುಂದುವರಿಯಲಿದ್ದು, ಭಕ್ತರಿಗಾಗಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಒಟ್ಟಾರೆಯಾಗಿ ನಗರದಾದ್ಯಂತ ವೈಕುಂಠ ಏಕಾದಶಿಯ ಪ್ರಯುಕ್ತ ಆಧ್ಯಾತ್ಮಿಕ ವಾತಾವರಣ ಮನೆಮಾಡಿತ್ತು.
