ಮಂಡ್ಯ, ನವೆಂಬರ್ 12, 2025 : ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ತಿಥಿ ಸಿನಿಮಾ ಬಳಿಕ ಹೆಚ್ಚು ಜನಪ್ರಿಯತೆ ಪಡೆದಿದ್ದ ಗಡ್ಡಪ್ಪ ಮೂಲತಃ ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ (89). ನೊದೆ ಕೊಪ್ಪಲು ಗ್ರಾಮದವರಾದ ಇವರು ತಿಥಿ ಸಿನಿಮಾ ಬಳಿಕ ಭಾರೀ ಜನಪ್ರಿಯತೆ ಗಳಿಸಿಸಿದ್ದರು. ಅಲ್ಲದೆ ಈ ಸಿನಿಮಾಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದರು ಕೂಡ. ನಂತರ ‘ತರ್ಲೆ ವಿಲೇಜ್’ ‘‘ಏನ್ ನಿನ್ ಪ್ರಾಬ್ಲಮ್ಮು’ ಚಿತ್ರದಲ್ಲಿ ನಟಿಸಿದ್ದರು. ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು.
ಗಡ್ಡಪ್ಪ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಕೂಡ ಮಾಡಿಕೊಂಡಿದ್ದರು. ಬಳಿಕ ಆಪರೇಷನ್ ಆಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಗಡ್ಡಪ್ಪ ಕುಟುಂಬ ಮೂಲಗಳು ತಿಳಿಸಿವೆ.
