ಮೈಸೂರು , ಜನವರಿ 5, 2025 :ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೂಲಕ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಅಡಿಪಾಯ ಹಾಕಿದ್ದಾರೆ.
ಹೊಸ ವರ್ಷದ ಪ್ರಯುಕ್ತ ‘ಪ್ರತಾಪ್ ಸಿಂಹ ಸ್ನೇಹ ಬಳಗ’ದ ವತಿಯಿಂದ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ, ಬಿಜೆಪಿ ಚಿಹ್ನೆ ಹಾಗೂ ಸಿಂಹ ಅವರು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಾಗೂ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಚಾಮರಾಜ ಕ್ಷೇತ್ರವು ತಮಗೆ ಎಲ್ಲಾ ದೃಷ್ಟಿಯಿಂದಲೂ ಅನುಕೂಲಕರವಾಗಿರುವುದರಿಂದ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.
ಕೇಂದ್ರ ರಾಜಕಾರಣದ ನಂತರ ರಾಜ್ಯ ರಾಜಕಾರಣಕ್ಕೆ ಬರುವುದು ಸಹಜ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡ ಅವರು, ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದಿರುವ ಈ ಕ್ಷೇತ್ರದಲ್ಲಿ ಈಗಿನಿಂದಲೇ ಚಟುವಟಿಕೆ ಆರಂಭಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿಯ ಗಲಾಟೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಸರ್ಕಾರ ಕೊಲೆಗಡುಕರನ್ನು ಪೋಷಿಸುತ್ತಿದೆ ಎಂದು ಆರೋಪಿಸಿದರು. ಶಾಸಕ ಭರತ್ ರೆಡ್ಡಿ ಅವರ ಉನ್ಮಾದದ ವರ್ತನೆಗೆ ಸರ್ಕಾರ ನೀಡಿದ ಅತಿಯಾದ ಸ್ವಾತಂತ್ರ್ಯವೇ ಕಾರಣವಾಗಿದ್ದು, ರಾಜ್ಯದಲ್ಲಿ ಯುಪಿ-ಬಿಹಾರ ಮಾದರಿಯ ಸಂಸ್ಕೃತಿ ತಲೆ ಎತ್ತುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಈ ಘಟನೆಯಲ್ಲಿ ಜನಾರ್ದನ ರೆಡ್ಡಿ ಅವರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಮುರಿಯಬಹುದು ಆದರೆ ಅವರ ಆಡಳಿತ ವೈಖರಿಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಮತ್ತೊಂದೆಡೆ ಬೆಂಗಳೂರಿನ ಕೋಗಿಲು ಬಡವಾಣೆ ವಿಚಾರವಾಗಿ ಮಾತನಾಡಿದ ಅವರು, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರಿಗೆ ನಿವೇಶನ ನೀಡುವ ಮೂಲಕ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ವರುಣ ಕ್ಷೇತ್ರದಲ್ಲಿ ನಿವೇಶನ ಇಲ್ಲದ ಕನ್ನಡಿಗರಿಗೆ ಮೊದಲು ಜಾಗ ನೀಡಿ ಎಂದು ಆಗ್ರಹಿಸಿದ ಅವರು, ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದು ಕರ್ನಾಟಕದ ಭವಿಷ್ಯಕ್ಕೆ ದೊಡ್ಡ ಗಂಡಾಂತರ ತರಲಿದೆ ಎಂದು ಎಚ್ಚರಿಸಿದರು.
