ಬೆಳಗಾವಿ, ನವೆಂಬರ್ 5, 2025 : ನಾವು ಕೂಡ ರೈತರು, ಕಾರ್ಖಾನೆ ಇದ್ದ ಕಾರಣಕ್ಕೆ ರೈತರ ಕಷ್ಟ ಗೊತ್ತಿಲ್ಲ ಅಂತಲ್ಲ. ರೈತರಿಗೂ ಅನ್ಯಾಯ ಆಗಬಾರದು, ಕಾರ್ಖಾನೆ ಮಾಲೀಕರಿಗೂ ಅನ್ಯಾಯ ಆಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕಬ್ಬು ಬೆಲೆ ಹೆಚ್ಚಳಕ್ಕೆ ರೈತರ ಪ್ರತಿಭಟನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ ಸಚಿವರು, ರೈತರು ಮತ್ತು ಕಾರ್ಖಾನೆ ಮಾಲೀಕರ ಜಂಟಿ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು. ಆದಾಗ್ಯೂ, ಬೆಲೆ ಮಾತುಕತೆಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಕಾರ್ಖಾನೆ ಮಾಲೀಕರು, ರೈತರು ಸೇರಿ ಸಭೆ ಮಾಡುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ನಾನು ಬ್ಯೂಸಿ ಇದ್ದ ಕಾರಣ ಮೀಟಿಂಗ್‌ನಲ್ಲಿ ಇರಲಿಲ್ಲ. ನನ್ನ ತಮ್ಮ ಹಾಗೂ ಮಗ ರೈತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ರೈತರ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ರೈತರ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿ, ರಾಜಕೀಯ ಬಿಟ್ಟು ಪ್ರತಿಭಟನೆಗೆ ಹೋಗಲಿ. ರೈತರ ಬಗೆಗಿನ ಬಿಜೆಪಿ ಹೋರಾಟ ಮತ್ತು ಕಾಳಜಿ ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ ಎಂದರು.
