ಮೈಸೂರು, ನವೆಂಬರ್ 15, 2025 : ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಹುಲಿ ದಾಳಿಯ ಪ್ರಕರಣಗಳನ್ನು ತಡೆಗಟ್ಟಲು ಕರ್ನಾಟಕ ಅರಣ್ಯ ಇಲಾಖೆಯು ಇದೀಗ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ರೈತರು ಮತ್ತು ಅರಣ್ಯದ ಸಮೀಪ ವಾಸಿಸುವವರಿಗೆ ಮನುಷ್ಯನ ಮುಖವನ್ನು ಹೋಲುವ ವಿಶೇಷ ‘ಫೇಸ್ ಮಾಸ್ಕ್’ಗಳನ್ನು ವಿತರಿಸಲು ಇಲಾಖೆ ಚಿಂತನೆ ನಡೆಸಿದೆ.
ಸಾಮಾನ್ಯವಾಗಿ ಹುಲಿಗಳು ತಮ್ಮ ಬೇಟೆಯ ಮೇಲೆ ಹಿಂಬದಿಯಿಂದ, ಪ್ರಮುಖವಾಗಿ ಕುತ್ತಿಗೆಯ ಭಾಗಕ್ಕೆ ಗುರಿಯಿಟ್ಟು ದಾಳಿ ನಡೆಸುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು, ವ್ಯಕ್ತಿಯ ಹಿಂಭಾಗದಲ್ಲಿ ಸಹ ಮನುಷ್ಯನ ಮುಖದ ಆಕಾರದ ಮಾಸ್ಕ್ ಧರಿಸುವುದರಿಂದ, ಹುಲಿಯು ಮುಂದೆ ನಿಂತಿದೆ ಎಂದು ತಪ್ಪಾಗಿ ಭಾವಿಸಿ ದಾಳಿ ಮಾಡುವುದರಿಂದ ಹಿಂದೆ ಸರಿಯಬಹುದು ಎಂಬುದು ಈ ಯೋಜನೆಯ ಹಿಂದಿರುವ ತಜ್ಞರ ಅಭಿಪ್ರಾಯವಾಗಿದೆ.

ಸುಂದರಬನ್ ಮಾದರಿ:
ಈ ವಿನೂತನ ಮಾದರಿಯನ್ನು ಪಶ್ಚಿಮ ಬಂಗಾಳದ ಸುಂದರಬನ್ ದ್ವೀಪ ಪ್ರದೇಶದಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಸುಂದರಬನ್‌ನಲ್ಲಿ ಹುಲಿ ದಾಳಿ ತಪ್ಪಿಸಿಕೊಳ್ಳಲು ಇದೇ ಮಾದರಿಯ ಮುಖವಾಡಗಳನ್ನು ಬಳಸುತ್ತಿದ್ದು, ಇದೀಗ ಕರ್ನಾಟಕದಲ್ಲಿಯೂ ಅದನ್ನು ಅನುಸರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.ತಜ್ಞರ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಾಯೋಗಿಕವಾಗಿ ಈ ಮಾಸ್ಕ್‌ಗಳನ್ನು ವಿತರಿಸಲು ಸಿದ್ಧತೆ ನಡೆದಿದೆ.
10,000 ಜನರಿಗೆ ವಿತರಣೆ:
ಸದ್ಯಕ್ಕೆ, ಅರಣ್ಯ ಇಲಾಖೆಯು ಕಾಡಂಚಿನ ಗ್ರಾಮಗಳ ಸುಮಾರು 10 ಸಾವಿರ ಜನರಿಗೆ ಈ ವಿಶೇಷ ಮಾಸ್ಕ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ. ಅಲ್ಲದೆ, ಸಫಾರಿ ಸಿಬ್ಬಂದಿಗಳನ್ನು ಬಳಸಿಕೊಂಡು ಸ್ಥಳೀಯ ಜನರಲ್ಲಿ ಹುಲಿ ದಾಳಿ ತಡೆಯುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಇಲಾಖೆ ಕೈಗೊಂಡಿದೆ.
ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ನಡುವೆ, ಅರಣ್ಯ ಇಲಾಖೆಯ ಈ ‘ಮುಖವಾಡದ ಗುರಾಣಿ’ ಪ್ರಯೋಗವು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
