ಮೈಸೂರು, ಮಾರ್ಚ್ 5, 2026 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯತ್ನಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ನಗರದ ಕುರುಬಾರಹಳ್ಳಿ ಸರ್ವೇ ನಂಬರ್ 4ರಲ್ಲಿರುವ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 24 ಎಕರೆ 10 ಗುಂಟೆ ಜಮೀನಿನ ವ್ಯವಹಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1984ರಲ್ಲಿ ರೇವತಿ ಎಂ. ಉಚ್ಚಿಲ್ ಎಂಬುವವರು ಈ ಜಮೀನನ್ನು ಮಾರಾಟ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆಗ ಸರ್ಕಾರವು ಕೇವಲ 8 ಎಕರೆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಮಾರಾಟ ಮಾಡಲು ಅನುಮತಿ ನೀಡಿತ್ತು. ತದನಂತರ, 2025ರ ಆಗಸ್ಟ್ 4ರಂದು ತಹಸೀಲ್ದಾರ್ ಅವರು ಈ ಸಂಪೂರ್ಣ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿದ್ದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಅವಧಿಯಲ್ಲೂ ಈ ಜಮೀನನ್ನು ‘ಬಿ-ಖರಾಬು’ (ಸರ್ಕಾರಿ ಜಮೀನು) ಎಂದು ದಾಖಲಿಸಲಾಗಿತ್ತು.
ಅಕ್ರಮದ ಆರೋಪ
ಸರ್ಕಾರದ ವಶದಲ್ಲಿರುವ ಈ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ತಮ್ಮದೆಂದು ಹೇಳಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನ್ಯಾಯಾಲಯದ ತೀರ್ಪಿನ ನಕಲಿ ದಾಖಲೆಗಳನ್ನು ನೀಡಿ ಈ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.
ಈ ಜಮೀನನ್ನು ಬಿ.ಎಸ್. ಡೆವಲಪರ್ಸ್ ಮತ್ತು ಅಧೀಶ ಡೆವಲಪರ್ಸ್ ಎಂಬ ಸಂಸ್ಥೆಗಳಿಗೆ ಸೇಲ್ ಡೀಡ್ ಮಾಡಿಕೊಡಲು ಸಿದ್ಧತೆ ನಡೆದಿದೆ. ಸರ್ಕಾರದ ಸ್ವತ್ತನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಪ್ರಭಾವಿಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಈಗ ಮೂಡಿದೆ.
ಸರ್ಕಾರಕ್ಕೆ ಎಚ್ಚರಿಕೆ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಇಂತಹ ಬೃಹತ್ ಹಗರಣ ನಡೆಯುತ್ತಿದೆ. ಮುಡಾ ಹಗರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದ್ದರಿಂದಲೇ ಇಂತಹ ಅಕ್ರಮಗಳು ಮುಂದುವರಿಯುತ್ತಿವೆ,” ಎಂದು ಶ್ರೀವತ್ಸ ಕಿಡಿಕಾರಿದ್ದಾರೆ. ಸರ್ಕಾರದ ಜಮೀನನ್ನು ರಕ್ಷಿಸಲು ತಾವು ಹೋರಾಟ ಮಾಡುವುದಾಗಿ ತಿಳಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
