ಬೆಂಗಳೂರು, ಜನವರಿ 22, 2026 : ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವು ಡ್ರಗ್ಸ್ ಕಳ್ಳಸಾಗಣೆಗೆ ಮಕ್ಕಳ ಕಥೆ ಪುಸ್ತಕಗಳನ್ನು ಬಳಸುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಡಿಸ್ ಅಬಾಬಾದಿಂದ ಬಂದಿದ್ದ 70 ವರ್ಷದ ಚಿಲಿ ದೇಶದ ಪ್ರಜೆಯನ್ನು ಬಂಧಿಸಿ, ಆತನ ಬಳಿಯಿದ್ದ ಸುಮಾರು 7.7 ಕೆಜಿ ತೂಕದ ಉನ್ನತ ದರ್ಜೆಯ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಸ್ಪ್ಯಾನಿಷ್ ಭಾಷೆಯ ಕಥೆ ಪುಸ್ತಕಗಳ ಪುಟಗಳ ನಡುವೆ ಅತಿ ಜಾಗರೂಕತೆಯಿಂದ ಮರೆಮಾಚಿದ್ದ ಈ ಮಾದಕ ವಸ್ತುವಿನಲ್ಲಿ 3 ಕೆಜಿ ಬಿಳಿ ಪುಡಿ ಹಾಗೂ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಬಣ್ಣ ಮಿಶ್ರಣ ಮಾಡಿದ್ದ 4.5 ಕೆಜಿ ‘ಬ್ಲ್ಯಾಕ್ ಕೊಕೇನ್’ ಪತ್ತೆಯಾಗಿದೆ.
ಬ್ರೆಜಿಲ್‌ನ ಸೌವ್ ಪೌಲೋದಲ್ಲಿ ಈ ಸರಕನ್ನು ಪಡೆದಿದ್ದ ಆರೋಪಿಯು ಬೆಂಗಳೂರಿನಲ್ಲಿ ಇದನ್ನು ಹಸ್ತಾಂತರಿಸಬೇಕಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಕೋಟ್ಯಂತರ ರೂಪಾಯಿಗಳಾಗಿದ್ದು, ಆರೋಪಿ ಕೇವಲ ಸ್ಪ್ಯಾನಿಷ್ ಭಾಷೆ ಮಾತ್ರ ಮಾತನಾಡುತ್ತಿರುವುದರಿಂದ ಹೆಚ್ಚಿನ ತನಿಖೆಗಾಗಿ ಕಸ್ಟಮ್ಸ್ ಅಧಿಕಾರಿಗಳು ಭಾಷಾಂತರಕಾರರ ನೆರವು ಪಡೆಯುತ್ತಿದ್ದಾರೆ.
