ಮೈಸೂರು, ಜನವರಿ 12, 2026 : ಮೈಸೂರಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರನ್ನು ಬದಲಾವಣೆ ಮಾಡಿ ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೈಬಿಟ್ಟಿರುವುದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ತಂದ ಅಪಮಾನವಾಗಿದೆ ಎಂದು ಅವರು ಕಿಡಿ ಕಾರಿದರು.
ಸ್ವಾತಂತ್ರ್ಯ ತಂದುಕೊಟ್ಟವರ ಹೆಸರನ್ನೇ ಕಿತ್ತುಹಾಕುವ ಮೂಲಕ ಬಿಜೆಪಿ ಚರಿತ್ರೆಯಿಂದ ಗಾಂಧೀಜಿಯವರನ್ನು ಅಳಿಸಲು ಪ್ರಯತ್ನಿಸುತ್ತಿದೆ ಮತ್ತು ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಹೆಸರು ಬದಲಿಸುವ ಕೆಲಸದಲ್ಲಿ ಮಗ್ನವಾಗಿದೆ ಎಂದು ಟೀಕಿಸಿದರು.
ಈ ಯೋಜನೆಯಲ್ಲಿ ಕೇಂದ್ರದ ಪಾಲನ್ನು ಶೇಕಡಾ 90 ರಿಂದ 60 ಕ್ಕೆ ಇಳಿಸಿ ರಾಜ್ಯಗಳ ಮೇಲೆ ಹೊರೆ ಹೊರಿಸಲಾಗುತ್ತಿದೆ ಹಾಗೂ ರಾಜ್ಯಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ಹಣವನ್ನು ನೀಡದೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ ಎಂದು ಸಚಿವರು ಆರೋಪಿಸಿದರು. ಕೋವಿಡ್ ಸಮಯದಲ್ಲಿ 19 ಕೋಟಿ ಜನರಿಗೆ ಆಸರೆಯಾಗಿದ್ದ ಈ ಕಾಯ್ದೆಯನ್ನು ಈಗ ಜನರ ದುಡಿಯುವ ಹಕ್ಕಿಗೆ ಮಾರಕವಾಗುವಂತೆ ರೂಪಿಸಲಾಗಿದ್ದು, ಕಾಂಗ್ರೆಸ್ ಪಕ್ಷವು ಈ ‘ಕರಾಳ ಕಾಯ್ದೆ’ಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಬಿಹಾರದ ಚುನಾವಣಾ ಸಮಯದಲ್ಲಿ ಮಹಿಳೆಯರಿಗೆ ಹಣ ಹಂಚಿಕೆ ಮಾಡಿದ ವಿಚಾರದಲ್ಲಿ ಚುನಾವಣಾ ಆಯೋಗದ ಮೌನವನ್ನು ಪ್ರಶ್ನಿಸಿದ ಅವರು, ಬಿಜೆಪಿ ‘ಓಟ್ ಚೋರ್’ ದಾರಿಯ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ದೂರಿದರು. ಬಳ್ಳಾರಿ ಪಾದಯಾತ್ರೆ ವಿಚಾರವಾಗಿ ಮಾತನಾಡುತ್ತಾ, ಈ ಹಿಂದೆ ಬಳ್ಳಾರಿಯಲ್ಲಿ ಕಾನೂನು ಬಾಹಿರ ಗಣಿಗಾರಿಕೆ ಮತ್ತು ಅವ್ಯವಸ್ಥೆ ಇದ್ದ ಕಾರಣ ನಾವು ಪಾದಯಾತ್ರೆ ಮಾಡಿದ್ದೆವು, ಆದರೆ ಈಗ ಬಿಜೆಪಿ ಮಾಡುತ್ತಿರುವ ಪಾದಯಾತ್ರೆ ಹಾಸ್ಯಾಸ್ಪದವಾಗಿದೆ ಎಂದರು.
ಕೊನೆಯದಾಗಿ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ವಿರೋಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಕನ್ನಡಿಗರಿಗೆ ಮೀಸಲಾತಿ ಸಿಗಲೇಬೇಕು ಎಂದು ಪ್ರತಿಪಾದಿಸಿದರು. ಕಂಪನಿಗಳಿಗೆ ಭೂಮಿ ಮತ್ತು ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ, ಹೀಗಿದ್ದೂ ಕನ್ನಡಿಗರ ಹಿತಾಸಕ್ತಿಗೆ ವಿರೋಧ ವ್ಯಕ್ತಪಡಿಸಿದರೆ ಸರ್ಕಾರವು ತಕ್ಕ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
