ಸದ್ಯ ರಾಮನಗರ ಜಿಲ್ಲೆಯಲ್ಲಿರುವ ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರ ಶಾಸಕರಾಗಿರೋ ಡಿಕೆ, ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸೋ ವಾಗ್ದಾನ ಮಾಡಿದ್ದಾರೆ. ಆದ್ರೆ, ಇದಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತೀವ್ರ ವಿರೋಧಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಈ ನಿರ್ಧಾರದ ಹಿಂದೆ ಬೇನಾಮಿ ಆಸ್ತಿ ಬಾಂಬ್ ಸಿಡಿಸಿದ್ದಾರೆ. ಇದೀಗ ಇದಕ್ಕೆ ಕೆಂಡಾಮಂಡಲರಾಗಿರುವ ಡಿಕೆಶಿ, ಕುಮಾರಸ್ವಾಮಿ ಅವರು ಸಿಎಂ ಆದವರು ಪ್ರಜ್ಞಾವಂತರು ಅಂದುಕೊಂಡಿದ್ದೆ. ಆದ್ರೆ, ಅವರಿಗೆ ಕಾಮನ್ ಸೆನ್ಸ್ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ ಕನಕಪುರ ಕ್ಷೇತ್ರವನ್ನ ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಜನ ಆಸ್ತಿಗಳನ್ನ ಮಾರಬೇಡಿ. ತಮ್ಮ ಭೂಮಿಗಳನ್ನು ಮಾರಿಕೊಂಡು ಹೋಗದಂತೆ ಜನತೆಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರಲಿದೆ ಎಂದು ಹೇಳಿದ್ದೇನೆ. ರಾಮನಗರ ಜಿಲ್ಲೆಯ ಅನೇಕ ನಾಯಕರು ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲ ಬೆಂಗಳೂರು ವ್ಯಾಪ್ತಿಯ ರಾಮನಗರದವರು.ಇದರ ಇತಿಹಾಸ, ದಾಖಲೆಗಳನ್ನ ಕುಮಾರಸ್ವಾಮಿ ಒಮ್ಮೆ ಓದಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.