ನಂಜನಗೂಡು, ನವೆಂಬರ್ 18, 2025 : ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು 35 ವರ್ಷದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ಮೃತ ಕಾರ್ಮಿಕನ ಕುಟುಂಬಸ್ಥರು ಮತ್ತು ಸ್ಥಳೀಯರು ತೋಟದ ಮಾಲೀಕ ಮತ್ತು ಗುತ್ತಿಗೆದಾರನ (ಮೇಸ್ತ್ರಿ) ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ.
ಮೃತ ದುರ್ದೈವಿಯನ್ನು ಲಿಂಗರಾಜು (35) ಎಂದು ಗುರುತಿಸಲಾಗಿದೆ. ಸಂತೋಷ್ ಎಂಬುವರಿಗೆ ಸೇರಿದ ತೆಂಗಿನ ತೋಟದಲ್ಲಿ ಹುಲ್ಲಹಳ್ಳಿಯ ಮಂಜು ಎಂಬಾತ ಕಾಯಿ ಕೀಳಲು ಗುತ್ತಿಗೆ ಪಡೆದಿದ್ದರು. ಇಂದು ಬೆಳಿಗ್ಗೆ ಲಿಂಗರಾಜು ಅವರು ಮರ ಹತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಾಯಿ ಕೀಳುವ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣಾ ಕವಚ (Safety Gear) ಅಥವಾ ಸುರಕ್ಷತಾ ಸಾಧನಗಳನ್ನು ಒದಗಿಸದಿರುವುದೇ ಈ ದುರ್ಘಟನೆಗೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ರಕ್ಷಣಾ ಸಾಧನಗಳಿಲ್ಲದೆ ಮರ ಹತ್ತಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದ ಲಿಂಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಕುಟುಂಬಕ್ಕೆ ವೈಯುಕ್ತಿಕ ಪರಿಹಾರವನ್ನು ನೀಡಿ ನೆರವು ನೀಡಿದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತೋಟದ ಮಾಲೀಕ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
