ನವದೆಹಲಿ : ಲಿಕ್ಕರ್ ನೀತಿ ಹಗರಣ ಸಂಬಂಧ ವಿಚಾರಣೆಗೆ ಇಡಿ ಬಾರಿ ಬಾರಿ ಸಮನ್ಸ್ ನೀಡಿದರೂ ಸ್ಪಂದಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಸ್ವತಃ ದೆಹಲಿ ಕೋರ್ಟ್ನಿಂದಲೇ ಸಮನ್ಸ್ ಹೋಗಿದೆ. ಮಾರ್ಚ್ 16ಕ್ಕೆ ಕೋರ್ಟ್ಗೆ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿದೆ. ತಾನು ಎಂಟು ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್ನಲ್ಲಿ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಮನ್ಸ್ ಹೊರಡಿಸಿದೆ.
ದೆಹಲಿ ಸರ್ಕಾರದ ಮದ್ಯ ನೀತಿ ಹಗರಣ ಸಂಬಂಧ ವಿಚಾರಣೆ ನಡೆಸಲು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಈವರೆಗೆ ಎಂಟು ಬಾರಿ ಸಮನ್ಸ್ ಕೊಟ್ಟಿದೆ. ಎಂಟು ಬಾರಿಯು ಅವರು ಸ್ಪಂದಿಸಿಲ್ಲ. ಮಾರ್ಚ್ 4ಕ್ಕೆ ಕೊನೆಯದಾಗಿ ಸಮನ್ಸ್ ಕೊಡಲಾಗಿತ್ತು. ಮೊದಲ ಮೂರು ಸಮನ್ಸ್ಗೆ ದೆಹಲಿ ಸಿಎಂ ಸ್ಪಂದಿಸದೇ ಇದ್ದಾಗಲೇ ಸ್ಥಳೀಯ ಕೋರ್ಟ್ವೊಂದರಲ್ಲಿ ಇಡಿ ದೂರು ಕೊಟ್ಟಿತ್ತು. ನಂತರದ ಐದು ಸಮನ್ಸ್ಗಳಿಗೂ ಅವರು ಸ್ಪಂದಿಸುತ್ತಿಲ್ಲ ಎಂದು ಇಡಿ ಮತ್ತೊಮ್ಮೆ ದೂರು ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 16ಕ್ಕೆ ತನ್ನಲ್ಲಿ ಹಾಜರಾಗುವಂತೆ ಕೇಜ್ರಿವಾಲ್ಗೆ ತಿಳಿಸಿದೆ.