:ಶಕ್ತಿ ಯೋಜನೆಯನ್ನ ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ 148 ಬಸ್ಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಸದ್ಯ KSRTC ಯಲ್ಲಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗುತ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.
ನಾನು ಪಲ್ಲಕ್ಕಿ ಬಸ್ನಲ್ಲಿ ಕುಳಿತು ನೋಡಿದೆ. ಹಾಗೆನೇ ಬಸ್ನ ಸೀಟ್ನಲ್ಲಿ ಮಲಗಿ ನೋಡಿದೆ. ಸರಿಯಾಗಿ ಬಸ್ ಸೀಟ್ 6 ಅಡಿ ಉದ್ದವಾಗಿದೆ. ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ನಲ್ಲಿ ಮೈಸೂರಿಗೆ ಹೋಗುವಂತೆ ತಿಳಿಸಿದ್ದೇನೆ ಎಂದರು.
ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ಇಲ್ಲಿನ ಸೇವೆಯನ್ನ ಇತರ ರಾಜ್ಯಗಳ ಸಾರಿಗೆಗೂ ಅಳವಡಿಕೆ ಮಾಡುವ ಚಿಂತನೆ ಮಾಡುತ್ತಿದ್ದಾರೆ. ನೂತನ ಬಸ್ಗೆ ಪಲ್ಲಕ್ಕಿ ಹೆಸರು ಕೊಟ್ಟ ಸಚಿವರಿಗೆ ಪ್ರಶಸ್ತಿ ಕೊಡಬೇಕು. ಪಲ್ಲಕ್ಕಿ ಬಸ್ ಪ್ರತಿ ಮನೆಯರ ಮಹಾರಾಣಿಯನ್ನ ಕರೆದುಕೊಂಡು ಹೋಗಲಿದೆ ಎಂದರು.