ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವ ಬೆನ್ನಲ್ಲೇ ಅವರ ಮನೆಯವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದ್ದಾರೆ. ಅರುಣ್ ಯೋಗಿರಾಜ್ ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವುದರಿಂದ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಅರುಣ್ ರಾಷ್ಟ್ರದ ಗಮನ ಸೆಳೆದಿರುವುದು ಅವರ ಕುಟುಂಬದವರು, ಸ್ಥಳೀಯರನ್ನು ಹರ್ಷಚಿತ್ತರಾನ್ನಾಗಿಸಿದೆ.
ಜನವರಿ 22 ರಂದು ಅಯೋದ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಅನಾವರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅರುಣ್ ಯೋಗಿ ಮನೆಗೆ ಭೇಟಿ ನೀಡಿರುವ ಕಾಂಗ್ರೆಸ್ಸಿಗರು ರಾಜ್ ಕುಟುಂಬಸ್ಥರನ್ನು ಸನ್ಮಾನಿಸಿದ್ದಾರೆ. ಅರುಣ್ ಯೋಗಿ ರಾಜ್ ಪತ್ನಿ ವಿಜೇತ ಹಾಗೂ ತಾಯಿ ಸರಸ್ವತಿ ಅವರನ್ನು ಸನ್ಮಾನಿಸಿದ್ದಾರೆ.
ಮೈಸೂರಿನ ಪಾಠಶಾಲಾ ಬಳಿ ಇರುವ ಅರುಣ್ ಯೋಗಿರಾಜ್ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಎಂಕೆ ಸೋಮಶೇಖರ್ ತೆರಳಿ ಸನ್ಮಾನಿಸಿದ್ದಾರೆ. ಈ ವೇಳೆ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಸುಶೃತ್ ಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.