ಬೆಂಗಳೂರು, ಜನವರಿ 9, 2026 : ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಕಸರತ್ತು ಕೊಂಚ ತಣ್ಣಗಾದ ಸುಳಿವು ಸಿಕ್ಕ ಬೆನ್ನಲ್ಲೇ ಇದೀಗ ಕೈ ಹೈ ಕಮಾಂಡ್ ಮೇಜರ್ ಸಂದೇಶವನ್ನು ರವಾನೆ ಮಾಡಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಈ ನಡೆಯಿಂದ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಗೋಳಿಲ್ಲ ಎಂದು ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.
ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿ ಐದು ರಾಜ್ಯಗಳ ಚುನಾವಣೆ ಮಾರ್ಚ್ ವೇಳೆಗೆ ನಡೆಯಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ನೇಮಿಸಿರುವುದರಿಂದ ಸದ್ಯಕ್ಕೆ ಅಧಿಕಾರ ಹಸ್ತಾಂತರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನೇನಿದ್ದರೂ ಈ ರಾಜ್ಯಗಳ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ನಂತರವೇ ಹೈಕಮಾಂಡ್ ಇತ್ತ ಗಮನಹರಿಸುವ ಸಾಧ್ಯತೆಗಳಿವೆ.
ಅಲ್ಲಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ಥಾನವೂ ಭದ್ರ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಜೊತೆಗೆ ಸದ್ಯಕ್ಕೆ ತಲೆನೋವು ತಪ್ಪುತ್ತದೆ ಎಂಬ ಲೆಕ್ಕಾಚಾರವೂ ವರಿಷ್ಠರದ್ದಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ತಮ್ಮನ್ನು ಅಸ್ಸಾಂಗೆ ಪಕ್ಷದ ಉಸ್ತುವಾರಿಯಾಗಿ ನೇಮಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಬೇರೆ ಆಯ್ಕೆಗಳಿಲ್ಲ. ಕಾಂಗ್ರೆಸ್ಸಿಗನಾಗಿ, ಪಕ್ಷಕ್ಕಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
