ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಳೆ ಎರಡು ಮಹತ್ವದ ಸಭೆ ನಡೆಸಲಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಜೊತೆಗೆ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ಬೆಳಗ್ಗೆ ನೂತನವಾಗಿ ಆಯ್ಕೆಯಾದ ಡಿಸಿಸಿ ಅಧ್ಯಕ್ಷರ ಜೊತೆಗೆ ಸಭೆ ನಡೆಸಲಿದ್ದು, ಬಳಿಕ ಮಧ್ಯಾಹ್ನ ಮೂವರು ನಾಯಕರೊಂದಿಗೆ ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಯಾವ ಶಾಸಕರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಸೇರಿ ಡಿಕೆಶಿ ಕ್ಯಾಬಿನೆಟ್ನಲ್ಲಿ ಖಾಲಿ ಇರುವ 2 ಸ್ಥಾನ ಭರ್ತಿ ಮಾಡುವ ಸಂಬಂಧ ಚರ್ಚೆ ನಡೆಯಲಿದೆ. 2028ರ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲು ಸೂಚನೆ ಜೊತೆಗೆ ಸರ್ಕಾರ ಮತ್ತು ಪಕ್ಷ ಎರಡೂ ಸಮನ್ವಯತೆಯಿಂದ ಕೆಲಸ ಮಾಡಲು ಸಭೆಯಲ್ಲಿ ಸ್ಟ್ರಾಟಜಿ ರೂಪಿಸಲಿದ್ದಾರೆ ಎನ್ನಲಾಗಿದೆ.
