ಮೈಸೂರು, ಡಿಸೆಂಬರ್ 24, 2025 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು 2026ರ ಜನವರಿ 11ರಂದು ‘ಫಿಟ್ ಮೈಸೂರು’ ವಾಕಥಾನ್ ಅನ್ನು ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಜಿಎಸ್ಎಸ್ ಸಮೂಹ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಬೃಹತ್ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ಬಳಿ ವಾಕಥಾನ್‌ಗೆ ಚಾಲನೆ ದೊರೆಯಲಿದ್ದು, ಒಟ್ಟು 5 ಕಿಲೋ ಮೀಟರ್ ದೂರವನ್ನು ಈ ನಡಿಗೆ ಕ್ರಮಿಸಲಿದೆ. ಫಿಟ್ ಮೈಸೂರು-ಆರೋಗ್ಯಕರ ಮೈಸೂರು ಮಾತ್ರವಲ್ಲದೆ, ಸ್ವಚ್ಛ ಮೈಸೂರು, ಹಸಿರು ಮೈಸೂರು ಹಾಗೂ ಸುರಕ್ಷಿತ ಮೈಸೂರು ಎಂಬ ನಾಲ್ಕು ಪ್ರಮುಖ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಪತಿ ಎನ್ ಕೆ ಲೋಕನಾಥ್ ಅವರು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಕುಲಸಚಿವೆ ಎಂ ಕೆ ಸವಿತಾ ಹಾಗೂ ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ಡಿ ಅವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು. ನಗರದ ನಾಗರಿಕರು ಮತ್ತು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮೈಸೂರನ್ನು ಆರೋಗ್ಯಕರವಾಗಿರಿಸಲು ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು.
