ಮೈಸೂರು, ಏಪ್ರಿಲ್ 18, 2026: ಸರ್ಕಾರಿ ಅಧಿಕಾರಿಗಳೇ ಸೇರಿಕೊಂಡು ಸರ್ಕಾರದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡುವ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಕಬಳಿಸಿರುವ ಗಂಭೀರ ಆರೋಪ ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಮಹೇಶ್, ಕಂದಾಯ ನಿರೀಕ್ಷಕ (RI) ಮಂಜುನಾಥ್ ಹಾಗೂ ಗ್ರಾಮ ಆಡಳಿತಾಧಿಕಾರಿ (VA) ಅಜೀಂ ಖಾನ್ ಅವರುಗಳು ಶಾಮೀಲಾಗಿ ಈ ಗೋಲ್ಮಾಲ್ ನಡೆಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಹಿ ಕೃಷ್ಣ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡುವ ಮೂಲಕ ಈ ಹಗರಣವನ್ನು ಬಯಲಿಗೆಳೆದಿದ್ದಾರೆ.
ಘಟನೆಯ ವಿವರದಂತೆ, 2003-2005ರ ಅವಧಿಯಲ್ಲಿ ಬಡವರಿಗೆ ನಿವೇಶನ ನೀಡುವ ಉದ್ದೇಶದಿಂದ ಆಶ್ರಯ ಯೋಜನೆಯಡಿ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿಯ ಸರ್ವೇ ನಂಬರ್ 259/3 ಮತ್ತು 252/2ರ ಸುಮಾರು 30 ಗುಂಟೆ ಭೂಮಿಯನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದುಕೊಂಡಿತ್ತು. ಮೂಲತಃ ಕೆಂಚಯ್ಯ ಎಂಬುವವರ ಕುಟುಂಬಕ್ಕೆ ಸೇರಿದ್ದ ಈ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಆಶ್ರಯ ಯೋಜನೆಗೆ ಮೀಸಲಿಟ್ಟಿತ್ತು. ಈ ಮಧ್ಯೆ, ಕೆಂಚಯ್ಯನ ಮಗಳು ಸುಂದ್ರಮ್ಮ ಜಮೀನಿನ ಭಾಗಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವು ಅವರಿಗೆ 10 ಗುಂಟೆ ಜಮೀನು ನೀಡುವಂತೆ ಆದೇಶಿಸಿತ್ತು. ಆದರೆ ಉಳಿದ 20 ಗುಂಟೆ ಜಮೀನು ದಾಖಲೆಗಳಲ್ಲಿ ಕೆಂಚಯ್ಯ ಅವರ ಹೆಸರಿನಲ್ಲೇ ಉಳಿದಿದ್ದನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಆಶ್ರಯ ಯೋಜನೆಗೆ ಭೂಮಿ ಹಸ್ತಾಂತರವಾಗಿರುವ ಅಸಲಿ ದಾಖಲೆಗಳನ್ನು ಮುಚ್ಚಿಟ್ಟು ಕೆಂಚಯ್ಯ ಅವರ ಮಕ್ಕಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ.
ವಿಶೇಷವೆಂದರೆ, ಸದರಿ ಜಮೀನಿನ ಮೇಲೆ ಯಾವುದೇ ವ್ಯವಹಾರ (Transaction) ನಡೆಸದಂತೆ ಮಹಾನಗರ ಪಾಲಿಕೆಯು ನೋಟಿಸ್ ನೀಡಿದ್ದರೂ ಸಹ, ಅದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ತದನಂತರ ಈ ಭೂಮಿಯನ್ನು ಸೈಯದ್ ಫೈಸಲ್ ಎಂಬ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದು, ಆತ ಕೇವಲ ಕೆಲವೇ ದಿನಗಳಲ್ಲಿ ಫಾಜೀಲ್ ಬೇಗ್ ಎಂಬುವವರಿಗೆ ಮಾರಾಟ ಮಾಡಿದ್ದಾನೆ. ಈ ಫಾಜೀಲ್ ಬೇಗ್ ಎಂಬಾತ ಪ್ರಕರಣದಲ್ಲಿ ಭಾಗಿಯಾಗಿರುವ ಗ್ರಾಮ ಆಡಳಿತಾಧಿಕಾರಿ ಅಜೀಂ ಖಾನ್ ಅವರ ಸಂಬಂಧಿ ಎಂಬುದು ಲಭ್ಯವಿರುವ ಮಾಹಿತಿಯಿಂದ ದೃಢಪಟ್ಟಿದೆ. ಈ ಮೂಲಕ ಸರ್ಕಾರಿ ಆಸ್ತಿಯನ್ನು ವ್ಯವಸ್ಥಿತವಾಗಿ ಖಾಸಗಿ ಪಾಲಾಗುವಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ನೇಹಮಹಿ ಕೃಷ್ಣ ಅವರು ಒತ್ತಾಯಿಸಿದ್ದಾರೆ.
