ಮೈಸೂರು, ಡಿಸೆಂಬರ್ 22,2025 :ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತವರು ಜಿಲ್ಲೆ ಮೈಸೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಬೆಳಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ನಗರದ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿ ಮನವಿಯನ್ನು ತಾಳ್ಮೆಯಿಂದ ಆಲಿಸಿದ ಸಿದ್ದರಾಮಯ್ಯ, ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಜನತಾ ದರ್ಶನದ ವೇಳೆ ಸಿದ್ದರಾಮನಹುಂಡಿ ಗ್ರಾಮದ ಹಳೆಯ ಪರಿಚಯಸ್ಥರೊಬ್ಬರು ಸಿಎಂ ಅವರನ್ನು ಮನೆಗೆ ಬರುವಂತೆ ಆಹ್ವಾನಿಸಿದರು. ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿದ ಸಿಎಂ, “ನೀನು ಯಾವಾಗ ಕರೆಯುತ್ತಿಯೋ ಆಗ ಬರುತ್ತೇನೆ, ಊಟ ಮಾಡಿಸು ಸಾಕು” ಎಂದು ಆತ್ಮೀಯವಾಗಿ ನುಡಿದರ ಕಾರ್ಯಕ್ರಮದ ಮಧ್ಯೆ ಪೈಲ್ವಾನ್ ಒಬ್ಬರನ್ನು ಹತ್ತಿರ ಕರೆದ ಮುಖ್ಯಮಂತ್ರಿಗಳು, ಕುಶಲೋಪರಿ ವಿಚಾರಿಸಿ ಅವರಿಗೆ ಪ್ರೋತ್ಸಾಹದಾಯಕವಾಗಿ 500 ರೂಪಾಯಿ ನೀಡಿದರು. ಬೆಳಿಗ್ಗೆಯಿಂದಲೇ ನಿವಾಸದ ಮುಂದೆ ಸಾಲುಗಟ್ಟಿ ನಿಂತಿದ್ದ ಜನರ ಬಳಿಗೆ ಖುದ್ದಾಗಿ ತೆರಳಿ ಮನವಿಗಳನ್ನು ಸ್ವೀಕರಿಸುವ ಮೂಲಕ ಸಿದ್ದರಾಮಯ್ಯ ಅವರು ಗಮನ ಸೆಳೆದರು.
