ಬೆಂಗಳೂರು, ನವೆಂಬರ್ 17, 2025 :ಸಿಎಂ ಸಿದ್ದರಾಮಯ್ಯ ಇವತ್ತು ಮತ್ತೆ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಿಎಂ ಕುರ್ಚಿಗೇರಲು ಡಿಸಿಎಂ ಡಿಕೆಶಿ ಸಾಕಷ್ಟು ಸರ್ಕಸ್ ನಡೆಸ್ತಿದ್ದು, ಶತಾಯ ಗತಾಯ ಮುಖ್ಯಮಂತ್ರಿ ಆಗ್ಲೇಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಪ್ರತಿತಂತ್ರ ಹೆಣೆಯುತ್ತಿದ್ದು, ಈಗಾಗಲೇ ಸಂಪುಟ ಪುನರ್ ರಚನೆ ಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ಪಡೆದಿದ್ದಾರೆ.
ಕಾಂಗ್ರೆಸ್ ನಲ್ಲಿ ಕುರ್ಚಿ ಪಾಲಿಟಿಕ್ಸ್ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದ್ದು, ಸಿಎಂ ಸಿದ್ದರಾಮಯ್ಯ ಕಳೆದೊಂದು ವಾರದಲ್ಲಿ 2ನೇ ಬಾರಿ ದಿಲ್ಲಿ ದಂಡಯಾತ್ರೆ ಕೈಗೊಂಡಿದ್ದಾರೆ. ಈ ಬಾರಿ ಪಿಎಂ ಮೋದಿ ಭೇಟಿ ಕಾರಣ ವಿದ್ದರೂ ತೆರೆಮರೆಯಲ್ಲಿ ಕುರ್ಚಿ ಉಳಿಸಿಕೊಳ್ಳೋ ಲೆಕ್ಕಾಚಾರ ಇದೆ.
ಸಿಎಂ -ಪಿಎಂ ಭೇಟಿ..
ಸಿಎಂ ಸಿದ್ದರಾಮಯ್ಯ ಪಿಎಂ ಮೋದಿ ಭೇಟಿಗೆ ಇವತ್ತು ಸಮಯ ನಿಗದಿಯಾಗಿದ್ದು, ಮಹತ್ವದ ಚರ್ಚೆ ನಡೆಯಲಿದೆ.ಕಬ್ಬು ಬೆಳೆಗಾರರ ಸಮಸ್ಯೆಯೂ ಸೇರಿದಂತೆ ರಾಜ್ಯಕ್ಕೆ ಸಂಬಂಧಪಟ್ಟ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಪಿಎಂ ಮೋದಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ ಪ್ರಧಾನಿ ಭೇಟಿಗಾಗಿ ಮುಖ್ಯಮಂತ್ರಿ ಕಚೇರಿಯಿಂದ ಸಮಯ ಕೇಳಲಾಗಿತ್ತು. ಇವತ್ತು ಸೋಮವಾರ ಸಂಜೆ 5 ಗಂಟೆಗೆ ಪ್ರಧಾನಿ ಕಚೇರಿಯಿಂದ ಸಮಯಾವಕಾಶ ನಿಗದಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಳೆ ಹಾನಿ ಪರಿಹಾರಕ್ಕೆ 1450 ಕೋಟಿ ರೂ. ನೆರವು ಹಾಗೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕಾಗಿ ಸಿದ್ದರಾಮಯ್ಯ ಮನವಿ ಸಲ್ಲಿಸುವ ಸಾಧ್ಯತೆಯಿದೆ.
