ಬೆಂಗಳೂರು ಜ.06: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ತನಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಶುಕ್ರವಾರ ಸಿಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಸದರಿ ಪ್ರಕರಣ ವಿಸ್ತೃತ ಪೀಠದ ವಿಚಾರಣೆಗೆ ಸೂಕ್ತ ಎಂದು ಶಿಫಾರಸು ಮಾಡಿದೆ.
ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ರಾಜ್ಯ ಸರ್ಕಾರ 2023ರ ನ.28ರಂದು ಹೊರಡಿಸಿದ ಆದೇಶ ಮತ್ತು ಇದೇ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ 2023ರ ಡಿ.22ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಈ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ಅರ್ಜಿ ಮತ್ತು ಸಿಬಿಐ ಶುಕ್ರವಾರ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.
ಅರ್ಜಿದಾರರ ಪರ ವಕೀಲರ ಮತ್ತು ಸರ್ಕಾರದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ವಾದವನ್ನು ಒಂದು ಗಂಟೆಗೂ ಅಧಿಕ ಕಾಲ ಆಲಿಸಿದ ನ್ಯಾಯಪೀಠ, ಅರ್ಜಿಗಳನ್ನು ವಿಸ್ತೃತ ಪೀಠದ ವಿಚಾರಣೆಗೆ ಶಿಫಾರಸು ಮಾಡುವುದು ಸೂಕ್ತವೆನಿಸಿದೆ ಎಂದು ನಿರ್ಧರಿಸಿ ಈ ಆದೇಶ ಮಾಡಿ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಲೋಕಾಯುಕ್ತ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿತು.
ರಿಜಿಸ್ಟ್ರಾರ್ ಅವರು ಪ್ರಕರಣದ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ತಮ್ಮ ಆಯ್ಕೆ, ವಿವೇಚನೆ ಆಧಾರದ ಮೇಲೆ ಅರ್ಜಿಗಳ ವಿಚಾರಣೆಗಾಗಿ ಪೀಠವನ್ನು ರಚನೆ ಮಾಡಬಹುದು. ಅವರಿಂದ ರಚಿಸಲ್ಪಟ್ಟ ನ್ಯಾಯಪೀಠ ತುರ್ತಾಗಿ ಅರ್ಜಿಗಳನ್ನು ಪರಿಗಣಿಸಿ ಯುದ್ಧೋಪಾದಿಯಲ್ಲಿ ವಿಚಾರಣೆ ನಡೆಸಿ ನಿರ್ಧರಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಅಲ್ಲದೆ, ಮುಖ್ಯ ನ್ಯಾಯಮೂರ್ತಿಗಳು ವಿಸ್ತೃತ ಪೀಠ ರಚನೆ ಕುರಿತು ತೀರ್ಮಾನ ಕೈಗೊಳ್ಳುವವರೆಗೂ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬ ಅರ್ಜಿದಾರರ ಮನವಿ ಮತ್ತು ಸಿಬಿಐ ಸಹ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬ ಅಡ್ವೋಕೇಟ್ ಜನರಲ್ ಮನವಿಯನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿತು.