ನಂಜನಗೂಡು, ನವೆಂಬರ್ 20, 2025 : ಪಟ್ಟಣದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ಮಧ್ಯರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಘಟನೆಯು ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಂಜನಗೂಡಿನ ಶ್ರೀರಾಂಪುರ ಬಡಾವಣೆ ಮತ್ತು 5ನೇ ಕ್ರಾಸ್ ನಲ್ಲಿ ನಡೆದಿದೆ. ಶ್ರೀರಾಂಪುರ ಬಡಾವಣೆಯಲ್ಲಿರುವ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಅವರ ಕಾರು ಹಾಗೂ 5ನೇ ಕ್ರಾಸ್ ನಲ್ಲಿರುವ ಸಂತೋಷ್ ಎಂಬುವವರ ಕಾರು ಬೆಂಕಿಗೆ ಆಹುತಿಯಾಗಿದೆ.
ಮಧ್ಯರಾತ್ರಿ ಏಕಕಾಲದಲ್ಲಿ ಈ ಎರಡು ಕಾರುಗಳ ಮೇಲೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ನೀರು ಎರಚಿ ಬೆಂಕಿಯನ್ನು ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಗಾಂಜಾ ಜಾಲದ ಹಿನ್ನೆಲೆ ಬಗ್ಗೆ ಅನುಮಾನ
ಇಂತಹ ಕೃತ್ಯಗಳು ಹೆಚ್ಚಾಗುತ್ತಿರುವುದಕ್ಕೆ ಗಾಂಜಾ ಮಾರಾಟ ಮತ್ತು ಅದರ ವ್ಯಾಪಕ ಹರಡುವಿಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಂಜನಗೂಡಿನಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಪೊಲೀಸರು ಗಾಂಜಾ ಜಾಲ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಗಾಂಜಾದ ನಶೆಯಲ್ಲಿಯೇ ಇಂತಹ ಕೊಲೆ, ಸುಲಿಗೆ, ಕಳ್ಳತನ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ಹೆಚ್ಚಾಗುತ್ತಿವೆ. ಪಟ್ಟಣದಲ್ಲಿ ಬೀಟ್ ಪೊಲೀಸ್ ಇಲ್ಲದಿರುವುದು ಇಂತಹ ಘಟನೆಗಳಿಗೆ ಆಹ್ವಾನ ನೀಡಿದಂತಾಗಿದೆ, ಎಂದು ಸಂಘಟನೆಯ ಮುಖಂಡರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನೇ ದಿನೇ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಘಟನೆಗಳ ಮುಖಂಡರು ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೋಲಿಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ದುಷ್ಕರ್ಮಿಗಳ ಎಡೆಮುರಿ ಕಟ್ಟುವಂತೆ ಆಗ್ರಹಿಸಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
