೧೫ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರ
ಹಾಸನ: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಭಾಗವಾದ ಹಾಸನ ಕ್ಷೇತ್ರದಲ್ಲೂ ಮತದಾನ ಪ್ರಕ್ರಿಯೆ ಪೂರ್ಣಗೊಂಡು ೧೫ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಸೇರಿಯಾಗಿದೆ. ಇಷ್ಟು ದಿನಗಳಿದ್ದ ಅಬ್ಬರ, ಜನ ಜಂಗುಳಿ ಇಲ್ಲವಾದರೂ ಸೋಲು, ಗೆಲುವಿನ ಲೆಕ್ಕಾಚಾರ ಪ್ರಮುಖರ ಮನೆ, ಕಚೇರಿ ಹಾಗೂ ಸಾರ್ವಜನಿಕ ವಲಯದಲ್ಲಿ ಬಿಸ ಬಿಸಿಯಾಗಿ ಚರ್ಚೆಯಾಗುತ್ತಿವೆ.
ಕಳೆದ ಎರಡು ಚುನಾವಣೆಗಿಂತಲೂ ಈ ಬಾರಿ ಅತೀ ಹೆಚ್ಚು ಮತದಾನವಾಗಿದ್ದು ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಲಭಿಸಿರಬಹುದು ಎಂಬ ಚರ್ಚೆಗಲಾಗುತ್ತಿವೆ. ಕ್ಷೇತ್ರ ವ್ಯಾಪ್ತಿಯ ೨೨೨೧ ಮತಗಟ್ಟೆಗಳಲ್ಲೂ ಮತದಾರರ ಪಟ್ಟಿ ಹಿಡಿದು ಆಯಾ ಅಭ್ಯರ್ಥಿಗಳ ಪರವಾದ ಏಜೆಂಟರು ಮತದಾನ ಮಾಡಿದರು ಎಂನ್ನುವುದನ್ನು ಗುರುತು ಮಾಡಿಕೊಂಡಿದ್ದು, ಆ ಆಧಾರದಲ್ಲಿ ನಮ್ಮ ಅಭ್ಯರ್ಥಿಗೆ ಯರ್ಯಾರು ಮತ ಹಾಕಿರಬಹುದು, ನಾವು ಗೆಲ್ಲುತ್ತೇವಾ, ಮತಗಳ ಅಂತರ ಎಷ್ಟಿರಬಹುದು ಎಂಬ ಬಿರುಸಿನ ಚರ್ಚೆಗಳಲ್ಲಿ ತೊಡಗಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ನ ಶ್ರೇಯಸ್ ಪಟೇಲ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರಿಂದ ಇಬ್ಬರಲ್ಲಿ ಯಾರು ಗೆಲ್ಲಬಹುದು, ಯಾವ ಭಾಗದಲ್ಲಿ ಯಾರಿಗೆ ಒಲವು ಲಭಿಸಿದೆ ಎಂದು ಹಳ್ಳಿ ಹಳ್ಳಿಗಳಲ್ಲೂ ಜನರು ಮಾತನಾಡಿಕೊಂಡರು. ತಮ್ಮ ಬೂತ್ ಮಟ್ಟದ ಕಾರ್ಯಕರ್ತರಿಂದ ಈಗಾಗಲೇ ಮಾಹಿತಿ ಕಲೆ ಹಾಕಿರುವ ಅಭ್ಯರ್ಥಿಗಳು ತಮ್ಮ ಪಾಲಿಗೆ ಎಷ್ಟು ಮತಗಳು ಬಿದ್ದಿರಬಹುದು ಎಂಬುದನ್ನು ಅಂದಾಜು ಮಾಡಿಕೊಂಡಿದ್ದಾರೆ. ತಮ್ಮದೇ ದೃಷ್ಟಿಕೋನ ಮತ್ತು ಊಹೆಯಲ್ಲಿ ಈ ಲೆಕ್ಕಾಚಾರ ನಡೆದಿರುವುದರಿಂದ ನಾನೇ ಮುಂದಿನ ಸಂಸದ ಎಂಬ ನಂಬಿಕೆ ಇಬ್ಬರೂ ಅಭ್ಯರ್ಥಿಗಳಲ್ಲಿ ಮೂಡಿದೆ. ಆದರೆ ಮತದಾರ ಪ್ರಭುಗಳ ಆಂತರರ್ಯದ ಗುಟ್ಟು ಫಲಿತಾಂಶದ ದಿನವಷ್ಟೇ ಹೊರ ಬರಲಿದ್ದು ಅಲ್ಲಿಯ ವರೆಗೆ ಅಳೆದು ತೂಗುವುದನ್ನು ಬಿಟ್ಟು ಯಾರು ಗೆದ್ದವರು ಎನ್ನುವುದನ್ನು ನಿಖರವಾಗಿ ಹೇಳುವುದು ಯಾರಿಂದಲೂ ಕಷ್ಟಸಾಧ್ಯ.
ಮತದಾನದಲ್ಲಿ ಮಹಿಳೆಯರದ್ದೇ ಮೇಲುಗೈ:
ಕಡೂರು ಒಳಗೊಂಡು ಈ ವ್ಯಾಪ್ತಿಯಲ್ಲಿ ೨೨೨೧ ಮತಗಟ್ಟೆಗಳಿದ್ದು ೮,೬೩,೭೨೭ ಪುರುಷರು, ೮,೭೨,೮೪೦ ಮಹಿಳೆಯರು ಹಾಗೂ ೪೩ ಮಂದಿ ಇತರರು ಒಳಗೊಂಡು ೧೭,೩೬,೬೧೦ ಮತದಾರರಿದ್ದಾರೆ. ಈ ಪೈಕಿ ೬,೭೩,೧೭೪ ಪುರುಷರು, ೬,೭೫,೭೭೫ ಮಹಿಳೆಯರು ಹಾಗೂ ೭ ಇತರರು ಒಳಗೊಂಡು ಒಟ್ಟು ೧೩,೪೮,೯೬೬ ಮಂದಿ ಹಕ್ಕು ಚಲಾಯಿಸಿದ್ದು ಶೇ.೭೭.೬೮ ರಷ್ಟು ಮತದಾನ ದಾಖಲಾಗಿದೆ. ಒಟ್ಟು ಮತದಾರರ ಪೈಕಿ ೧,೯೦,೫೫೩ ಪುರುಷರು, ೧,೯೭,೦೬೫ ಮಹಿಳೆಯರು ಹಾಗೂ ೩೬ ಇತರರು ಸೇರಿ ೩,೮೭,೬೫೪ ಮಂದಿ ನಾನಾ ಕಾರಣಗಳಿಂದ ಈ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ಹೆಚ್ಚು ಸಂಖ್ಯೆಯಲ್ಲಿದ್ದು ಮತ ಚಲಾವಣೆ ಮಾಡಿದ ಸರಾಸರಿಯಲ್ಲೂ ಅವರೇ ಮುಂದಿರುವುದು ವಿಶೇಷ.
ಹೊಳೆನರಸೀಪುರದಲ್ಲಿ ಹೆಚ್ಚು ಮತದಾನ: ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆನರಸೀಪುರದಲ್ಲಿ ಅತೀಹೆಚ್ಚು ಶೇ.೮೨,೦೭ ರಷ್ಟು ಮತ್ತು ಹಾಸನದಲ್ಲಿ ಅತೀ ಕಡಿಮೆ ಶೇ.೬೯.೨೭ ರಷ್ಟು ಮತದಾನ ನಡೆದಿದೆ. ಉಳಿದಂತೆ ಶ್ರವಣಬೆಳಗೊಳ ೮೦.೬೩, ಅರಸೀಕೆರೆ ೮೦.೪೧, ಅರಕಲಗೂಡು ೭೯.೮೫, ಸಕಲೇಶಪುರ ೭೮.೫೮, ಬೇಲೂರು ೭೬.೨೮ ಮತ್ತು ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.೭೪.೭೩ ರಷ್ಟು ಮಂದಿ ಹಕವಕು ಚಲಾಯಿಸಿದ್ದಾರೆ.
ಮತ ಯಂತ್ರಗಳಿಗೆ ಬಿಗಿ ಭದ್ರತೆ: ಮತದಾನ ಮುಗಿದು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಆಯಾ ತಾಲೂಕು ಕೇಂದ್ರಗಳಿAದ ತರಲಾದ ಎಲ್ಲ ಮತ ಯಂತ್ರಗಳನ್ನು ನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಭದ್ರಪಡಿಸಲಾಗಿದ್ದು ಖಾಕಿ ಪಡೆ ಫಲಿತಾಂಶದ ದಿನದ ವರೆಗೂ ಅವೆಲ್ಲವನ್ನೂ ಹದ್ದಿನ ಕಣ್ಣಿಟ್ಟು ಸುರಕ್ಷಿತವಾಗಿ ನೋಡಿಕೊಲ್ಳಬೇಕಿದೆ. ಜೂ.೪ ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಫೊಟೋ: ಹಾಸನದ ಡೇರಿ ವೃತ್ತದ ಸಮೀಪವಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.