ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಭೀಕರ ಅಡಿಕೆ ಕಳ್ಳತನ ನಡೆದಿದ್ದು, ಟಿಬೆಟಿಯನ್ ರೈತರೊಬ್ಬರು ವರ್ಷಗಟ್ಟಲೆ ಬೆಳೆದಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ಕಿಡಿಗೇಡಿಗಳು ದೋಚಿದ್ದಾರೆ.

ಬೈಲಕುಪ್ಪೆಯ ತಿರುಮಲಾಪುರ ಗ್ರಾಮದ ಮುಖ್ಯರಸ್ತೆಯ ಅಂಚಿನಲ್ಲಿರುವ ಟಿಬೆಟಿಯನ್ ರೈತರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಈ ಕೃತ್ಯ ನಡೆದಿದೆ. ಕಳೆದ ಐದು ವರ್ಷಗಳಿಂದ ಸುಮಾರು 2 ಎಕರೆ ಪ್ರದೇಶದಲ್ಲಿ ಅತಿ ಕಷ್ಟಪಟ್ಟು ಅಡಿಕೆ ಬೆಳೆಯಲಾಗಿತ್ತು. ಇತ್ತೀಚೆಗಷ್ಟೇ ಅಡಿಕೆ ಕೊಯ್ಲು ಮಾಡಿ, ತೋಟದಲ್ಲೇ ಗುಡ್ಡೆ ಹಾಕಲಾಗಿತ್ತು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಇನ್ನೇನು ಎರಡು-ಮೂರು ದಿನಗಳಲ್ಲಿ ಹಸಿ ಅಡಿಕೆಯನ್ನು ಮಾರಾಟ ಮಾಡಲು ರೈತ ಸಿದ್ಧತೆ ನಡೆಸಿದ್ದರು. ಆದರೆ, ಇದನ್ನು ಗಮನಿಸಿದ ಖದೀಮರು ಒಂದೇ ರಾತ್ರಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ, ತೋಟದಲ್ಲಿದ್ದ ಅಡಿಕೆಯನ್ನೆಲ್ಲಾ ಕದ್ದೊಯ್ದಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈತಪ್ಪಿದ್ದರಿಂದ ರೈತರು ಈಗ ದಿಕ್ಕುತೋಚದಂತಾಗಿದ್ದಾರೆ.

ಪೊಲೀಸ್ ದೂರು: ಈ ಅಡಿಕೆ ಕಳ್ಳತನದ ಕುರಿತು ಬೈಲಕುಪ್ಪೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮುಖ್ಯರಸ್ತೆಯ ಅಕ್ಕಪಕ್ಕದಲ್ಲೇ ಇರುವ ತೋಟದಲ್ಲಿ ಈ ಮಟ್ಟದ ಕಳ್ಳತನ ನಡೆದಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
