ಮೈಸೂರು, ಜನವರಿ 29, 2026 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಗ್ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರವು ಪತ್ರಿಕೆಗಳಿಗೆ ಜಾಹಿರಾತು ನೀಡಿರುವುದು ಸಂಪೂರ್ಣವಾಗಿ ಸಂವಿಧಾನ ಬಾಹಿರವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರ್ಕಾರವು ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿರುವ ಕಾಯ್ದೆಯ ವಿರುದ್ಧ ಪತ್ರಿಕೆಗಳಲ್ಲಿ ಜಾಹಿರಾತು ನೀಡಿರುವುದು ಸರ್ಕಾರದ ಅತಿರೇಕದ ವರ್ತನೆಯನ್ನು ತೋರಿಸುತ್ತದೆ. ಕೇಂದ್ರದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲು ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಯೋಜನೆಗೆ ಯಾವುದೇ ಸಂಬಂಧವಿಲ್ಲದ ಆರ್.ಎಸ್.ಎಸ್ ಸಂಘಟನೆಯನ್ನು ಅನಗತ್ಯವಾಗಿ ಎಳೆದುತಂದು ‘ಸಂಗಪ್ಪ’ ಎಂದು ಉಲ್ಲೇಖಿಸಿರುವುದು ಖಂಡನೀಯ ಎಂದರು.
ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿಕೊಂಡು ಇಂತಹ ರಾಜಕೀಯ ಪ್ರೇರಿತ ಜಾಹಿರಾತುಗಳನ್ನು ನೀಡುವುದು ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶಗಳ ಉಲ್ಲಂಘನೆಯಾಗಿದೆ. ರಾಜಕೀಯ ಲಾಭಕ್ಕಾಗಿ ಸರ್ಕಾರಿ ಹಣ ಬಳಕೆ ಮಾಡಬಾರದೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ಹಿನ್ನೆಲೆಯಲ್ಲಿ, ಜಾಹಿರಾತಿನ ಮೂಲಕ ಸುಳ್ಳು ಸುದ್ದಿ ಹರಡುತ್ತಾ ಸಂವಿಧಾನ ಬಾಹಿರವಾಗಿ ವರ್ತಿಸುತ್ತಿರುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ಸಂವಿಧಾನದ 356ನೇ ವಿಧಿಯನ್ವಯ ವಜಾಗೊಳಿಸಬೇಕು ಎಂದು ಎಂ.ಜಿ. ಮಹೇಶ್ ಅವರು ಆಗ್ರಹಿಸಿದರು.
