ನಂಜನಗೂಡು, ನವೆಂಬರ್ 18, 2025 : ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು (Paddy Procurement Centers) ತೆರೆಯುವಂತೆ ಒತ್ತಾಯಿಸಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ರೈತರು ಭಾರಿ ಪ್ರತಿಭಟನೆ ನಡೆಸಿದರು. ಈ ವೇಳೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು, ರಸ್ತೆಯಲ್ಲಿ ಎತ್ತಿನ ಗಾಡಿಗಳನ್ನು ನಿಲ್ಲಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂಜನಗೂಡಿನ ಹುಲ್ಲಹಳ್ಳಿ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಭಾಗವಹಿಸಿದ್ದರು. ರೈತರು ರಸ್ತೆ ತಡೆಗೆ ಮುಂದಾದಾಗ, ರೈತರು ಮತ್ತು ಸ್ಥಳೀಯ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಪೊಲೀಸರ ವರ್ತನೆಯಿಂದ ಕೆರಳಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. “ಪ್ರಜಾಪ್ರಭುತ್ವದಲ್ಲಿ ನಾವು ಮತ ಹಾಕಿದ್ದೇವೆ. ನಮ್ಮ ಹಕ್ಕುಗಳನ್ನು ಕೇಳಲು ಬಂದಿದ್ದೇವೆ. ರಾಜಕಾರಣಿಗಳು ಬರುವಾಗ ಹೆದ್ದಾರಿಗಳನ್ನು ಬಂದ್ ಮಾಡುತ್ತೀರಿ. ನಾವು ಹಕ್ಕು ಕೇಳಲು ಬಂದ್ ಮಾಡಿದರೆ ಕೇಳುತ್ತಿದ್ದೀರಿ. ರೌಡಿಗಳಾಗಿರುವ ಶಾಸಕರು, ಸಂಸದರ ಮೇಲೆ ಕೇಸು ದಾಖಲು ಮಾಡಿ, ನಮ್ಮ ಮೇಲಲ್ಲ. ನಮಗೆ ಬೆದರಿಕೆ ಹಾಕುತ್ತಿದ್ದೀರಾ?” ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಭಾಗ್ಯರಾಜ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದು, ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡುವಲ್ಲಿ ವಿಫಲವಾಗಿವೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಒತ್ತಾಯಿಸಿದರು:
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಕ್ಷಣವೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ ₹500 ಹೆಚ್ಚುವರಿ ದರ ನಿಗದಿ ಮಾಡಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ರೈತರು ಬೆಳೆದ ಸಂಪೂರ್ಣ ಭತ್ತದ ಬೆಳೆಯನ್ನು ಖರೀದಿ ಕೇಂದ್ರದ ಮೂಲಕವೇ ಖರೀದಿ ಮಾಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕಬ್ಬು ಬೆಳೆಗಾರರಿಗೆ ಎಫ್ಆರ್‌ಪಿಗಿಂತ ಹೆಚ್ಚುವರಿ ಹಣ ನೀಡಬೇಕು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟಾವು ಮತ್ತು ಸಾಗಾಣಿಕೆಯನ್ನು ಬಿಟ್ಟು ₹2,900 ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ನಿಗದಿ ಮಾಡಿದಂತೆ, ದಕ್ಷಿಣ ಕರ್ನಾಟಕದ ಕಾರ್ಖಾನೆಗಳಿಗೂ ಕಬ್ಬು ಕಟಾವು ಸಾಗಾಣಿಕೆಯನ್ನು ಬಿಟ್ಟು ಹಣ ಪಾವತಿಗೆ ಸರ್ಕಾರ ಆದೇಶ ನೀಡಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಹಾಗೂ ಕಬ್ಬಿನ ಇಳುವರಿ ಪರೀಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಬೇಕು.
