ಅಸ್ಸಾಂ, ಡಿಸೆಂಬರ್ 20, 2025 : ರಾಜಧಾನಿ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ 7 ಕಾಡಾನೆಗಳ ಮಾರಣಹೋಮ ನಡೆದಿರುವ ಹೃದಯವಿದ್ರಾವಕ ಘಟನೆ ಶನಿವಾರ ಬೆಳಗಿನಜಾವ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಆನೆಗಳ ಹಿಂಡಿಗೆ ಸಾಯಿರಂಗ್- ನವದೆಹಲಿ ನಡುವಿನ ರಾಜಧಾನಿ ಎಕ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಕಾಡಾನೆಗಳು ಸಾವನ್ನಪ್ಪಿದ್ದು, ಒಂದು ಆನೆ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಇದೇ ವೇಳೆ ಅಪಘಾತದ ರಭಸಕ್ಕೆ ರೈಲಿನ ಐದು ಬೋಗಿಗಳು ಸಹ ಹಳಿ ತಪ್ಪಿದೆ, ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ.

ಇಂದು ಬೆಳಗಿನ ಜಾವ 2.17 ರ ಸುಮಾರಿಗೆ ಆನೆ ಕಾರಿಡಾರ್ ಅಲ್ಲದ ಸ್ಥಳದಲ್ಲಿ ಘಟನೆ ಸಂಭವಿಸಿದ್ದು, ಹಳಿಗಳ ಮೇಲೆ ಹಿಂಡು ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಇದರ ಹೊರತಾಗಿಯೂ, ಆನೆಗಳಿಗೆ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ರೈಲು ಹಳಿತಪ್ಪಿದ್ದರಿಂದ ಮತ್ತು ಆನೆಯ ದೇಹದ ಭಾಗಗಳು ಹಳಿಗಳ ಮೇಲೆ ಚದುರಿಹೋಗಿದ್ದರಿಂದ, ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸೇವೆಗಳು ಬಾಧಿತವಾಗಿವೆ ಎಂದು ಮೂಲಗಳು ತಿಳಿಸಿವೆ. ಹಳಿ ತಪ್ಪಿದ ಐದು ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿ ಲಭ್ಯವಿರುವ ಖಾಲಿ ಬರ್ತ್‌ಗಳಲ್ಲಿ ಇರಿಸಲಾಗಿದೆ.
ಘಟನೆ ಹಿನ್ನೆಲೆ, ಜಮುನಾಮುಖ್-ಕಂಪುರ ವಿಭಾಗದ ಮೂಲಕ ಹಾದುಹೋಗಬೇಕಿದ್ದ ರೈಲುಗಳನ್ನು ಯುಪಿ ಮಾರ್ಗದ ಮೂಲಕ ತಿರುಗಿಸಲಾಗಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
