ಮೈಸೂರು, ಜನವರಿ 8, 2025 :ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯ ಮೇಲೆ ಮಾದಕ ವ್ಯಸನಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎನ್.ಆರ್. ಮೊಹಲ್ಲಾದ ಡೀಮ್ ಕಾಟನ್ ಶಾಪ್ ಬಳಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮಾದಕ ವಸ್ತುಗಳ ಅಮಲಿನಲ್ಲಿದ್ದ ಯುವಕರ ಗುಂಪು ಪೊಲೀಸ್ ಪೇದೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಆರ್. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕಾರ್ತಿಕ್ ಸಿ (24 ವರ್ಷ): ಬಿನ್ ಲೇಟ್ ಚಿಕ್ಕಣ್ಣ, ಕುರಿಮಂಡಿ ಗ್ರಾಮ, ಭರತ್ ಪಿ.ಎಂ (25 ವರ್ಷ): ಬಿನ್ ಪ್ರಶಾಂತ್ ಸಿ.ಕೆ, ರವಿ ಪಿ @ ಪಿಪಿ (29 ವರ್ಷ): ಬಿನ್ ಲೇಟ್ ಪ್ರದೀಪ್.
ಕಾನೂನು ಕ್ರಮ:
ಆರೋಪಿಗಳ ವಿರುದ್ಧ ಮೈಸೂರು ನಗರದ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ಈಗಾಗಲೇ ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವ್ಯಸನಿಗಳ ಹಾವಳಿ ಹೆಚ್ಚುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
